Sidlaghatta : ಶಿಡ್ಲಘಟ್ಟ ನಗರದ ಅತ್ಯಂತ ಪುರಾತನ ಕೋಟೆ ಶ್ರೀ ಸೋಮೇಶ್ವರ ದೇವಾಲಯದ ನವೀಕರಣ ಕಾರ್ಯ ನಡೆಯುತ್ತಿದ್ದು, ಭಾನುವಾರ ದೇವಾಲಯದ ಧ್ವಜ ಸ್ಥಂಭ ಪ್ರತಿಷ್ಟಾಪನೆ ಕಾರ್ಯ ನಡೆಯಿತು.
ಜಿಲ್ಲೆಯ ಶಿಲ್ಪಕಲೆ ಎಂದೊಡನೆ ಬಾಣ, ನೊಳಂಬ, ಗಂಗ, ಚೋಳ, ಹೊಯ್ಸಳ ಮತ್ತು ವಿಜಯನಗರದ ಕಾಲದ ಶಿಲ್ಪ ಕಲೆಗಳ ನಂದಿಯ ಭೋಗನಂದೀಶ್ವರ ದೇವಾಲಯ ನೆನಪಾಗುತ್ತದೆ. ಇಷ್ಟೇ ಸುಂದರ ಶಿಲ್ಪಕಲೆಯುಳ್ಳ ದೇವಾಲಯವಾಗಿದ್ದುದು ಶಿಡ್ಲಘಟ್ಟದ ಕೋಟೆ ಸೋಮೇಶ್ವರ ದೇವಾಲಯ.
ದೇವಾಲಯ ಸೋಮೇಶ್ವರ ಸ್ವಾಮಿಯದ್ದಾದರೂ ಇಲ್ಲಿನ ಕಂಬಗಳ ಮೇಲೆ ರಾಮ, ಕೃಷ್ಣ, ಪರಶುರಾಮ, ವಾಮನ ಮುಂತಾದ ವಿಷ್ಣುವಿನ ದಶಾವತಾರದ ಕೆತ್ತನೆಗಳಿದ್ದವು. ಬೇಡರ ಕಣ್ಣಪ್ಪ ತನ್ನ ಕಣ್ಣುಗಳನ್ನು ಕಿತ್ತು ಶಿವನಿಗೆ ಅರ್ಪಿಸುವ ಶಿಲ್ಪಗಳು, ಅಲಂಕಾರ ಮಾಡಿಕೊಳ್ಳುವ ಸ್ತ್ರೀ, ಮೃದಂಗ, ಕೊಳಲು ಮುಂತಾದ ವಾದ್ಯಗಳನ್ನು ನುಡಿಸುವ ಶಿಲ್ಪಗಳು ಹಾಗೂ ವೆಂಕಟೇಶ್ವರ ಶಿಲ್ಪಗಳು ಅತ್ಯಾಕರ್ಷಕವಾಗಿದ್ದವು.
ಹಿಂದೆ ಇದ್ದ ದೇವಾಲಯದ ಮುಂದಿನ ಗರುಡಗಂಬದ ಕೆಳಗೆ ವಿಘ್ನೇಶ್ವರನ ಅಕ್ಕಪಕ್ಕ ಹಲಸಿನಹಣ್ಣನ್ನು ಹೊತ್ತುಕೊಂಡಿರುವ ವಿಶೇಷ ಶಿಲ್ಪವಿತ್ತು. ಈಗಿನ ತ್ರೀಡಿ ತಂತ್ರಜ್ಞಾನಕ್ಕೆ ಹೋಲಿಸಬಹುದಾದ ಮೂರು ಭಾವವಿರುವ ಹಸುವಿನ ಚಿತ್ರವನ್ನು ಶಿಲ್ಪದಲ್ಲಿ ಮೂಡಿಸಲಾಗಿತ್ತು.
“ಈ ಸೋಮೇಶ್ವರ ದೇವಾಲಯವು ಕಾಲಕ್ರಮೇಣ ಶಿಥಿಲವಾಯಿತು. ಮುಜರಾಯಿಗೆ ಸೇರಿದ್ದರೂ ಅಭಿವೃದ್ಧಿಯಾಗಲಿಲ್ಲ. ಇದನ್ನು ಕಂಡು ಕೆಲ ಆಸಕ್ತ ಭಕ್ತರು ಡಾಲ್ಫಿನ್ ನಾಗರಾಜ್ ಅವರ ನೇತೃತ್ವದಲ್ಲಿ ಹಣವನ್ನು ತಾವೇ ಸಂಗ್ರಹಿಸಿ ದೇವಾಲಯವನ್ನು ದುರಸ್ತಿಗೊಳಿಸಲು ಮುಂದಾಗಿರುವರು. ನಗರದಲ್ಲಿ ಹಿಂದೆ ಚನ್ನಕೇಶ್ವರ ದೇವಾಲಯವೊಂದಿತ್ತು. ಅದು ಕಾಲಾನುಕ್ರಮದಲ್ಲಿ ಅದು ನಾಶಗೊಂಡಿತು.
ಅಲ್ಲಿನ ಕೆಲ ಶಿಲ್ಪಗಳು, ಕೆತ್ತನೆಗಳುಳ್ಳ ಕಂಬಗಳು ಸೋಮೇಶ್ವರ ದೇವಾಲಯದಲ್ಲಿ ಸೇರಿದವು ಎಂದು ಕೆಲ ಹಿರಿಯರು ಹೇಳುವರು. ಆದರೂ ಅಪರೂಪದ ಶಿಲ್ಪಕಲೆಯುಳ್ಳ ಈ ದೇವಾಲಯವನ್ನು ಪುನರುತ್ಥಾನಗೊಳಿಸುತ್ತಿರುವ ಕಾರ್ಯ ಸ್ವಾಗತಾರ್ಹ. ಇದರಿಂದ ನಗರಕ್ಕೆ ಶ್ರೇಯಸ್ಸು ಉಂಟಾಗುತ್ತದೆ” ಎಂದು ದೇವಾಲಯದ ಅರ್ಚಕ ಕೆ.ಎನ್.ರಾಜಶೇಖರ್ ತಿಳಿಸಿದರು.
“ಕೋಟೆ ಸೋಮೇಶ್ವರ ದೇವಾಲಯ ಶಿಥಿಲವಾಗಿದ್ದನ್ನು ಕಂಡು ನಾವು ಕೆಲ ಸಮಾನಮನಸ್ಕರು ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕೆಂದು ಹೊರಟೆವು. ದೇವಾಲಯವನ್ನು ಸಂಪೂರ್ಣವಾಗಿ ಪುನರುಜ್ಜೀವಗೊಳಿಸುವ ಮೂಲಕ ನಮ್ಮ ಊರಿನ ಮುಖ್ಯ ದೇವಾಲಯವನ್ನು ಉಳಿಸುತ್ತೇವೆ” ಎಂದು ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಗರಾಜ್ ಹೇಳಿದರು.
ವೇದ ಪಂಡಿತರಾದ ಶ್ರೀ ಸತ್ಯನಾರಾಯಣ ಶಾಸ್ತ್ರೀ ಮತ್ತು ಬಶೆಟ್ಟಹಳ್ಳಿ ಕೃಷ್ಣ ಮೂರ್ತಿ ಶರ್ಮಾ ಅವರು ಪೂಜೆ ಸಲ್ಲಿಸಿದರು. ನಗರದ ವಿವಿಧ ಸಮಾಜದ ಪ್ರಮುಖರು ಹಾಜರಿದ್ದರು.