Sidlaghatta : ಇತರರನ್ನು ಮೆಚ್ಚಿಸಲು ಮತ್ತು ಪ್ರದರ್ಶನಕ್ಕಾಗಿ ಹಣ ಉಳ್ಳವರು ಆಡಂಬರ ಹಾಗೂ ಅದ್ದೂರಿ ಮದುವೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು ಸರಳ ವಿವಾಹವನ್ನು ಮಾಡಿಕೊಳ್ಳುವ ಮನಸ್ಸು ಮಾಡಬೇಕು. ಬಡವರು ಕೂಡ ಯಾರನ್ನೋ ಮೆಚ್ಚಿಸುವ ಹಠಕ್ಕೆ ಬಿದ್ದು ಸಾಲ ಮಾಡಿ ವಿವಾಹಗಳನ್ನು ಮಾಡಿಕೊಳ್ಳಬೇಡಿ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮಿ ತಿಳಿಸಿದರು.
ತಾಲ್ಲೂಕಿನ ಶ್ರೀ ಬ್ಯಾಟರಾಯನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ನಡೆದ 40 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಸಭೆಯಲ್ಲಿ ಅವರು ಮಾತನಾಡಿದರು.
ಗೃಹಸ್ಥಾಶ್ರಮ ಜೀವನಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳು ಉತ್ತಮ ಜೀವನ ರೂಪಸಿಕೊಳ್ಳಬೇಕು ಹಾಗೂ ಸಮಾಜದ ಮೆಚ್ಚುವಂತಹ ಮಾದರಿ ಜೀವನ ನಡೆಸಬೇಕು. ಸಣ್ಣ ಪುಟ್ಟ ವಿಷಯಕ್ಕೂ ಅನುಮಾನಪಟ್ಟು ಜಗಳವಾಡಬಾರದು. ಸಮಸ್ಯೆ ಪರಿಹರಿಕೊಳ್ಳುವುದರ ಜತೆಗೆ ಮನೆಯ ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. ನಮ್ಮ ಈ ಭಾಗದ ಅವಿಭಾಜ್ಯ ಜಿಲ್ಲೆಗಳ ರೈತರು ನೀರಿನ ಅಭಾವವಿದ್ದರು ಅತ್ಯಲ್ಪ ನೀರನ್ನು ತಂತ್ರಜ್ಞಾನ ಬಳಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತೀರಿ ಎಂದು ಹೇಳಿದರು.
ಸೌಮ್ಯ ಸ್ವಬಾವದ ಸಮಾಜ ಸೇವಕ ಆಂಜಿನಪ್ಪ ಅವರ ಜನೋಪಯೋಗಿ ಕಾರ್ಯಕ್ರಮಗಳು ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಎಸ್.ಎನ್ ಕ್ರಿಯಾ ಟ್ರಸ್ಟ್ ಅದ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ಮಾತನಾಡಿ, ತೀರ ಹಿಂದುಳಿದ ಬಡವರ್ಗದ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಅಂತಹವರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದು ನನ್ನ ಭಾಗ್ಯ ಎಂದು ಹೇಳಿದರು.
ಈ ಹಿಂದೆ ತಲಕಾಯಲಬೆಟ್ಟ ದೇವಸ್ಥಾನ, ನಗರದಲ್ಲಿ ಹಾಗೂ ಈಗ ಶ್ರೀ ಬ್ಯಾಟರಾಯಸ್ವಾಮಿ ಸನ್ನಿದಾನದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿವೆ. ಇದಲ್ಲದೆ ತಾಲ್ಲೂಕಿನಾದ್ಯಂತ ಕೊರೊನಾ ಸಂದರ್ಭದಲ್ಲಿ ಆಹಾರ ಕಿಟ್ಟುಗಳನ್ನು ನೀಡಿದ್ದು ನಿರಂತರ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಕ್ಷೇತ್ರದಲ್ಲಿ ಏನೇನೋ ಆಮಿಷಗಳನ್ನು ಒಡ್ಡಿ ಜನಗಳ ದಿಕ್ಕು ತಪ್ಪಿಸುತ್ತಿದ್ದು ಅಂತಹವರ ಬಗ್ಗೆ ಎಚ್ಚರಿಕೆಯಿಂದಿದ್ದು ಯೋಚನೆ ಮಾಡಿ ಮುಂಬರುವ ಚುನಾವಣೆಯಲ್ಲಿ ಉತ್ತಮ ಸೇವೆ ಮಾಡುವವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಇದೇ ವೇಳೆ ವಿವಾಹದಲ್ಲಿ ಬಾಗಿಯಾದ ನವ ದಂಪತಿಗಳಿಗೆ ಎಲ್.ಇ.ಡಿ.ಟೀವಿಯನ್ನು ನೀಡಲಾಯಿತು, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಶಾಖೆಯ ಪ್ರಧಾನಕಾರ್ಯದರ್ಶಿ ಶ್ರೀ ಮಂಗಳಾನಂದನಾಥಸ್ವಾಮಿ, ತಹಶೀಲ್ದಾರ್ ರಾಜೀವ್, ಶ್ರೀ ಬ್ಯಾಟರಾಯಸ್ವಾಮಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜರಾವ್, ಎ.ದೇವರಾಜ್, ವಿಶ್ವನಾಥ್ ಹಾಜರಿದ್ದರು.