Sidlaghatta : ಯುವಜನತೆ ತಂಬಾಕಿನ ವಿವಿಧ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ. ತಂಬಾಕು ಸೇವನೆಯಿಂದ ಆಗುವ ಮಾರಕ ಪರಿಣಾಮಗಳ ಬಗ್ಗೆ ಅರಿತು ಅದರಿಂದ ದೂರವುಳಿಯಬೇಕು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ತಿಳಿಸಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ತಂಬಾಕು ನಿಯಂತ್ರಣ ಘಟಕ, ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವೆನೆ ಕ್ಯಾನ್ಸರ್ ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಕೂಡಾ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದೆ. ತಂಬಾಕು ಮಾರಕವಾದ ವಸ್ತವಾಗಿದ್ದು ಇದನ್ನು 18 ವರ್ಷದೊಳಗಿನ ಮಕ್ಕಳಿಗೆ ನೀಡುವುದು ಕಾನೂನು ಬಾಹಿರ. ಅಲ್ಲದೇ ಶಾಲಾ ಸುತ್ತಮುತ್ತಲ ನೂರು ಮೀಟರ ಒಳಗಡೆ ಮಾರಾಟ ಮಾಡದಂತೆ ಸ್ಪಷ್ಟ ಆದೇಶವಿದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಮಾತನಾಡಿ, ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ವೆಚ್ಚದಾಯಕ ಚಿಕಿತ್ಸೆಯೆಂದರೆ ಅದು ಕ್ಯಾನ್ಸರ್‌ನ ಚಿಕಿತ್ಸೆಯಾಗಿದೆ. ಹಾಗಾಗಿ ಕ್ಯಾನ್ಸರ್‌ಗೆ ತುತ್ತಾದ ವ್ಯಕ್ತಿ ತಾನು ಮಾತ್ರ ಸಾಯದೆ ಆತನ ಕುಟುಂಬವನ್ನು ಆರ್ಥಿಕವಾಗಿ ಜರ್ಜರಿತನ್ನಾಗಿಸಿ ಬೀದಿಗೆ ತಳ್ಳಿ ಅವರು ಬದುಕಿದ್ದರೂ ಶವಗಳಂತೆ ಬದುಕುವ ಪರಿಸ್ಥಿತಿಗೆ ತರುತ್ತದೆ. ಹಾಗಾಗಿ ತಂಬಾಕು ಹಾಗೂ ಅದರ ಉತ್ಪನ್ನಗಳಿಂದ ದೂರ ಉಳಿದು, ಇತರರಿಗೂ ಅದರ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ ಮೂರ್ತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.