ತಾಲ್ಲೂಕಿನ ತಿಪ್ಪೇನಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೆಹರು ಯುವ ಕೇಂದ್ರ ಕೋಲಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ವಾಮಿ ವಿವೇಕಾನಂದ ಯುವ ಜನ ಸಂಘ, ಸರ್ವೋದಯ ಸ್ವಯಂ ಸೇವಾ ಸಂಸ್ಥೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ರಾಷ್ಟ್ರೀಯ ಯುವ ಸಪ್ತಾಹ, ಸ್ವಾಮಿ ವಿವೇಕಾನಂದ ರವರ 159 ನೇ ಜಯಂತಿ ಕಾರ್ಯಕ್ರಮದಲ್ಲಿ ಸಬ್ ಇನ್ಸ್ ಪೆಕ್ಟರ್ ಸತೀಶ್ ಮಾತನಾಡಿದರು.
ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಇದೇ ಕಾರಣಕ್ಕೆ ಸ್ವಾಮಿ ವಿವೇಕಾನಂದರನ್ನು ಯುವಜನರ ಆದರ್ಶ ಎಂದು ಗುರುತಿಸಲಾಗಿದೆ. ಅವರ ಆಶಯದಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿ ಪಡೆಯುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ – “ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ”. ಯುವಜನರಿಗೆ ಶಕ್ತಿಸಂಜೀವಿನಿಯನ್ನು ಬೋಧಿಸಿದರು. “ಫುಟ್ಬಾಲ್ ಆಡಿ ಬಲಿಷ್ಠವಾದ ಸ್ನಾಯುಗಳನ್ನು ಪಡೆದಿರೆಂದರೆ ನಿಮಗೆ ಭಗವದ್ಗೀತೆ ಸ್ಪಷ್ಟವಾಗಿ ಅರ್ಥವಾಗುವುದು” ಎಂದರು. “ನಿಮ್ಮಂತಹ ಯುವಕರಿಗಾಗಿ ನಾನು ಸಾವಿರ ಸಲ ಬೇಕಾದರೂ ಹುಟ್ಟಿಬಂದೇನು. ಈ ಕಾಯವಳಿದರೇನು, ನಾನು ನಿಮ್ಮೆಲ್ಲರಲ್ಲಿ ಸೂಕ್ಷ್ಮರೂಪದಲ್ಲಿದ್ದು ಸಾಧಿಸಬೇಕಾದುದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ” ಎಂದೂ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಕಾಶ್, ಪೊಲೀಸ್ ಇಲಾಖೆಯ ಆಕಾಶ್ ಮತ್ತು ಸುನಿಲ್, ಸರ್ವೋದಯ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಗಾಯಿತ್ರಿ, ಸ್ವಾಮಿ ವಿವೇಕಾನಂದ ಯುವ ಜನ ಸಂಘದ ಅಧ್ಯಕ್ಷ ನರೇಶ್ ಕುಮಾರ್, ಉಪನ್ಯಾಸಕರಾದ ಮಂಜುನಾಥ್, ಮುರಳಿ, ವಿಶ್ವನಾಥ್, ಭೂ ನ್ಯಾಯ ಮಂಡಳಿ ಸದಸ್ಯ ಕಿಟ್ಟಿ ಹಾಜರಿದ್ದರು.