Jangamakote, Sidlaghatta: ಸಾಮಾನ್ಯ ವ್ಯಕ್ತಿಯು ಸ್ವಾಭಿಮಾನದಿಂದ ಬದುಕು ನಡೆಸಲು ಉದ್ಯೋಗ ಹಾಗೂ ನೆಲೆಸಲು ಒಂದು ಸೂರಿನ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಮನೆ ಇಲ್ಲದ ಸಂಕಷ್ಟದಲ್ಲಿರುವವರನ್ನು ಆಯ್ಕೆ ಮಾಡಿ, ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ವಾಸ್ತಲ್ಯ ಮನೆಗಳನ್ನು ನಿರ್ಮಿಸಿ ನೀಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ನಿವಾಸಿ ಚಿಕ್ಕಮುನಿಪೂಜಪ್ಪ ಅವರಿಗೆ ಮಾತೃಶ್ರೀ ಡಾ.ಹೇಮಾವತಿ ಹೆಗ್ಗಡೆ ಅವರ ಜ್ಞಾನವಿಕಾಸ ಕಾರ್ಯಕ್ರಮದಡಿ ನಿರ್ಮಿಸಿದ “ವಾಸ್ತಲ್ಯ ಮನೆ”ಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷ ಜಿಲ್ಲೆಯಲ್ಲಿ ಒಟ್ಟು 9 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 134 ಮಂದಿ ನಿರ್ಗತಿಕರಿಗೆ ಪ್ರತಿ ತಿಂಗಳು ₹1,000 ಮಾಶಾಸನವಾಗಿ ನೀಡಲಾಗುತ್ತಿದ್ದು, ಚಿಕ್ಕಮುನಿಪೂಜಪ್ಪರು ಹೊಸ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಬೇಕು ಎಂಬುದು ನಮ್ಮ ಆಶಯ ಎಂದರು.
ಜಂಗಮಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಧರ್ಮಸ್ಥಳ ಯೋಜನೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಮಹಿಳೆಯರು ಹಾಗೂ ಬಡವರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ದೀಪವಾಗಿವೆ ಎಂದು ಶ್ಲಾಘಿಸಿದರು.
ಚಿಕ್ಕಮುನಿಪೂಜಪ್ಪರಿಗೆ ಹೊಸ ಮನೆ ನೀಡಿರುವುದು ಸಮುದಾಯದ ಎಲ್ಲರಿಗೂ ಸಂತೋಷದ ವಿಷಯವಾಗಿದ್ದು, ಅವರು ಸ್ವಾಭಿಮಾನದಿಂದ ನೆಮ್ಮದಿಯಾಗಿ ಬದುಕುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಎಸ್.ಸುರೇಶ್‌ಗೌಡ, ಅಂಚೆ ಇಲಾಖೆಯ ಶ್ರೀಧರ್, ವಲಯದ ಮೇಲ್ವಿಚಾರಕ ಮಂಜುನಾಥ್, ಜ್ಞಾನವಿಕಾಸ ಸಮನ್ವಯಕಾರಿ ಎಚ್.ಅರುಣ, ಜಂಗಮಕೋಟೆ ವಲಯದ ಎಲ್ಲಾ ಸೇವಾಪ್ರತಿನಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.