Jangamakote, Sidlaghatta : ರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮೀಣ ಭಾಗದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸುಧಾರಿಸತೊಡಗಿದ್ದಾರೆ. ಸಾಮಾಜಿಕವಾಗಿಯೂ ಮುಖ್ಯವಾಹಿನಿಯಲ್ಲಿ ಸಾಗುವಂತ ಪ್ರಯತ್ನ ಸಾಧ್ಯವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕೋ ಆರ್ಡಿನೇಟರ್ ರಾಜೀವ್‌ಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಂಗಮಕೋಟೆ ಬಳಿಯ ಚಿಕ್ಕವೀರಮ್ಮ ಪುಟ್ಟರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟ್ ನಿಂದ ಜಂಗಮಕೋಟೆ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘವು ಗ್ರಾಮೀಣ ಭಾಗದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.
ಮಹಿಳೆಯರು ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ಮಹಿಳೆಯರ ಸಬಲೀಕರಣ ಆಗುವುದರಿಂದ ಕುಟುಂಬಗಳ ಸಬಲೀಕರಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮಹಿಳೆಯರು ಹಣಕಾಸಿನ ನಿರ್ವಹಣೆಯಲ್ಲಿ ನಿಪುಣರು. ಮಹಿಳೆಯರ ಆರ್ಥಿಕ ಚುಟುವಟಿಕೆಗಳಿಗೆ ರಾಜ್ಯ ಸರ್ಕಾರವೂ ಬಹಳಷ್ಟು ಒತ್ತು ನೀಡುತ್ತಿದ್ದು ಇದರಿಂದ ಬಹಳಷ್ಟು ಮಹಿಳೆಯರ ಹಾಗೂ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸಂತಸಪಟ್ಟರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ನಮ್ಮದು ಬ್ಯಾಂಕ್ ನಿಂದ ಅಧಿಕೃತವಾಗಿ ಅನುಮತಿ ಪಡೆದ ಹಣಕಾಸು ಸಂಸ್ಥೆಯಾಗಿದ್ದು ವದಂತಿಗಳಿಗೆ ಯಾರು ಕೂಡ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ವರಮಹಾಲಕ್ಷ್ಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಸ್ವ ಸಹಾಯ ಸಂಘಗಳ ಪ್ರತಿನಿಗಳಿಗೆ ಸಂಘಗಳ ದಾಖಲೆಗಳನ್ನು ಹಸ್ತಾಂತರಿಸಲಾಯಿತು.
ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಹೀರೆಬಲ್ಲ ರವಿಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಂದೀಶ್ ಮುಖ್ಯ ಭಾಷಣ ಮಾಡಿ ವರ ಮಹಾಲಕ್ಷ್ಮಿ ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಮಂಜುನಾಥಗೌಡ, ರಾಮಕೃಷ್ಣಪ್ಪ, ಅರುಣ, ರೇಣುಕಮ್ಮ, ಕವಿತ ಹಾಜರಿದ್ದರು.