Sidlaghatta : “ಶರೀರದ ಯಾವೊಂದು ಅಂಗವನ್ನು ಕಳೆದುಕೊಂಡರೂ ಜೀವನ ನಡೆಸಬಹುದು, ಆದರೆ ದೃಷ್ಟಿ ದೋಷವಾದರೆ ಇಡೀ ಜೀವನ ಕತ್ತಲೆಯಲ್ಲೇ ಕಳೆಯಬೇಕು. ಹೀಗಾಗಿ ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು,” ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಹೇಳಿದರು.
ನಗರದ ಶ್ರೀ ಶೃಂಗೇರಿ ಶಂಕರಮಠದ ಆವರಣದಲ್ಲಿ ಸೋಮವಾರ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಚಿಕ್ಕಬಳ್ಳಾಪುರದ ಜೈನ್ ಮಿಷನ್ ಆಸ್ಪತ್ರೆ ಸಹಯೋಗದೊಂದಿಗೆ ಡಾ. ಡಿ. ವೀರೇಂದ್ರ ಹೆಗಡೆ ಅವರ 77ನೇ ವರ್ಷದ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿತ್ತು.
ಪ್ರಶಾಂತ್ ಅವರು “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಅವುಗಳನ್ನು ಬಡವರು ಸದುಪಯೋಗಪಡಿಸಿಕೊಳ್ಳಬೇಕು. ಸಮಾಜ ಸೇವಕರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬೆಂಬಲ ನೀಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಪೌರಾಯುಕ್ತ ಮಂಜುನಾಥ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಶ್ ಗೌಡ, ಶ್ರೀ ಶೃಂಗೇರಿ ಶಂಕರ ಮಠ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ವಿ. ಕೃಷ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದ್ ಗೌಡ, ಜೆಡಿಎಸ್ ಯುವ ಮುಖಂಡ ಬಿ.ಎನ್. ಸಚಿನ್ ಕುಮಾರ್, ಜೈನ್ ಮಿಷನ್ ಆಸ್ಪತ್ರೆಯ ವೈದ್ಯ ಡಾ. ರಂಜಿತ್, ಜ್ಞಾನವಿಕಾಸ್ ಸಮನ್ವಯ ಅಧಿಕಾರಿ ಅರುಣಾ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.