ಎಲ್ಲ ರೀಲರುಗಳನ್ನು ಕಳ್ಳರು ಸುಳ್ಳರು ಎನ್ನುವಂತೆ ರೀಲರುಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಶಿಡ್ಲಘಟ್ಟ ರೀಲರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್‌ಖಾನ್ ಆಗ್ರಹಿಸಿದರು.
ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಆವರಣದಲ್ಲಿನ ರೀಲರ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಮನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತನೊಬ್ಬನ ಮೇಲೆ ಅಲ್ಲಿನ ರೀಲರ್ ಒಬ್ಬರು ನಡೆಸಿರುವ ದಬ್ಬಾಳಿಕೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಹಾಗೆಯೆ ಸಚಿವರ ಸೂಚನೆ ಮೇರೆ ರೀಲರ್ ಮೇಲೆ ಎಫ್‌ಐಆರ್ ದಾಖಲಾಗಿರುವುದನ್ನು ಸಹ ಸ್ವಾಗತಿಸುತ್ತೇವೆ.
ಆದರೆ ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲ ರೀಲರುಗಳನ್ನು ಒಂದೆ ತಕ್ಕಡಿಯಲ್ಲಿ ತೂಕ ಹಾಕುವಂತೆ ಎಲ್ಲ ರೀಲರುಗಳ ಬಗ್ಗೆಯೂ ತುಚ್ಛವಾಗಿ ಮಾತನಾಡಿದ್ದಾರೆ. ರೇಷ್ಮೆಗೂಡಿನ ತೂಕದಲ್ಲಿ ಮೋಸ, ರೈತರಿಗೆ ಹಣ ನೀಡುವುದಲ್ಲಿ ಮೋಸಮಾಡುತ್ತಾರೆ ಎಂದಿದ್ದಾರೆ.
ಯಾರೋ ಒಬ್ಬರು ಮಾಡುವ ತಪ್ಪಿಗೆ ಅವರಿಗಷ್ಟೆ ಕಾನೂನು ಕ್ರಮ ಆಗಬೇಕೆ ವಿನಹ ಎಲ್ಲರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂದ ಅವರು, ಕುಮಾರಸ್ವಾಮಿ ಅವರು ಎಲ್ಲ ರೀಲರುಗಳ ಬಗ್ಗೆಯೂ ಕಳ್ಳರು ಸುಳ್ಳರು ಎಂದು ಹೇಳಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ರೀಲರ್ಸ್ ಅಸೋಸಿಯೇಷನ್‌ನ ರಾಜ್ಯ ಕಾರ‍್ಯಾಧ್ಯಕ್ಷ ಎಂ.ಡಿ.ಅನ್ವರ್ ಮಾತನಾಡಿ, ರಾಜ್ಯದಲ್ಲಿ 25 ರೇಷ್ಮೆಗೂಡು ಮಾರುಕಟ್ಟೆಗಳಿವೆ. ಪ್ರತಿ ಮಾರುಕಟ್ಟೆಗೂ ಡಿಡಿ ಹಂತದ ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಸರ್ಕಾರಿ ಅಧಿಕಾರಿ ಸಿಬ್ಬಂದಿಯೆ ಗೂಡನ್ನು ತೂಕ ಹಾಕುತ್ತಾರೆ. ಹಾಗಾಗಿ ಯಾವ ಹಂತದಲ್ಲಿ ತೂಕದಲ್ಲಿ ರೈತರಿಗೆ ರೀಲರುಗಳಿಂದ ಮೋಸ ಆಗುತ್ತಿದೆ. ಹಾಗೆಯೆ ರೀಲರುಗಳು ಖರೀದಿಸಿದ ಗೂಡಿನ ಬಾಬ್ತು ಹಣವನ್ನು ರೀಲರುಗಳು ಇ-ಹರಾಜು ಇರುವ ಕಡೆ ಬ್ಯಾಂಕ್ ಮೂಲಕ ಇ-ವ್ಯವಸ್ಥೆ ಇಲ್ಲದ ಕಡೆ ನಗದು, ಚೆಕ್, ಪೋನ್ ಪೇ ಮೂಲಕ ಹಣ ಬಟವಾಡೆ ಮಾಡಲಾಗುತ್ತಿದೆ.
ಹಾಗಾಗಿ ಯಾವ ಹಂತದಲ್ಲಿ ಗೂಡಿನ ತೂಕದಲ್ಲಿ ಮೋಸ ಆಗುತ್ತಿದೆ. ರೈತರಿಗೆ ಹಣ ಬಟವಾಡೆ ಮಾಡದೆ ಯಾವ ರೀಲರ್ ತಲೆ ಮರೆಸಿಕೊಂಡಿದ್ದಾನೆ ಎಂಬುದನ್ನು ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರೆ ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆಂದು ವ್ಯಂಗ್ಯವಾಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಪ್ಪ, ರಾಜ್ಯ ರೇಷ್ಮ್ಮೆ ಮಾರಾಟ ಸಹಕಾರ ಮಹಾ ಮಂಡಳಿಯ ಮಾಜಿ ಉಪಾಧ್ಯಕ್ಷ ರೆಹಮಾನ್, ಆನಂದ್, ಮಂಜುನಾಥ್, ಮುನಿಕೃಷ್ಣ, ನವೀದ್, ಬಾಂಬೆ ನವಾಜ್, ಜಮೀರ್, ಪರುಕ್ ಮುಜ್ಜು, ರಾಮಚಂದ್ರ ಹಾಜರಿದ್ದರು.