ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ ಹರಾಜು ಜಾರಿಗೆ ತರುವ ಮುನ್ನ ಪ್ರತಿನಿತ್ಯ 1200-1300 ಲಾಟು ಗೂಡು ಬರುತ್ತಿದ್ದು e-Auction ಜಾರಿಗೆ ಬಂದ ನಂತರ ಇದೀಗ ಪ್ರತಿನಿತ್ಯ 200-250 ಲಾಟು ಮಾತ್ರ ಬರುತ್ತಿದೆ. ಇದರಿಂದ ಇದನ್ನೇ ನಂಬಿ ಜೀವನ ನಡೆಸುತ್ತಿರುವ ಇಲ್ಲಿನ ರೀಲರ್‌ಗಳು ಸೇರಿದಂತೆ ಸರ್ಕಾರಕ್ಕೆ ಸಹ ತೊಂದರೆಯಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಸದಸ್ಯರು ಒತ್ತಾಯಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಪರಿಶೀಲನೆಗೆಂದು ಗುರುವಾರ ಭೇಟಿ ನೀಡಿದ್ದ ಜಂಟಿ ನಿರ್ದೇಶಕ ಬೈರಪ್ಪ ಅವರಿಗೆ ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮನವಿ ಸಲ್ಲಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಮಾತನಾಡಿ ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಏಷ್ಯಾದಲ್ಲಿಯೇ ಪ್ರಸಿದ್ದಿ ಪಡೆದ ಮಾರುಕಟ್ಟೆ ಎಂಬ ಹೆಸರು ಪಡೆದಿತ್ತು. ಪ್ರತಿನಿತ್ಯ ಕೋಟ್ಯಾಂತರ ರೂ ವ್ಯವಹಾರ ಈ ಮಾರುಕಟ್ಟೆಯಲ್ಲಿ ನಡೆಯುತ್ತಿತ್ತು. ಆದರೆ ರಾಜ್ಯದ ಬೇರೆಲ್ಲಿಯೂ ಇ ಹರಾಜು ಜಾರಿಗೆ ತರದೇ ಕೇವಲ ಶೀಡ್ಲಘಟ್ಟದಲ್ಲಿ ಮಾತ್ರ ಬಲವಂತವಾಗಿ ಇ ಹರಾಜು ಜಾರಿಗೆ ತಂದಿದ್ದೇ ಮಾರುಕಟ್ಟೆಯ ಇಂದಿನ ಸ್ಥಿತಿಗೆ ಕಾರಣ ಎಂದರು.
ಇ ಹರಾಜು ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷಗಳು ಸೇರಿದಂತೆ ಇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಮೊದಲೇ ಹಣವನ್ನು ತಮ್ಮ ಖಾತೆಗಳಲ್ಲಿ ಹಾಕಿ ಭಾಗವಹಿಸಬೇಕು. ರಜಾ ದಿನಗಳಲ್ಲಿ ಬ್ಯಾಂಕಿನ ತಮ್ಮ ಕಾತೆಗ ಹಣ ಸಂದಾಯ ಮಾಡಲು ಆಗದಿದ್ದರೆ ಇ ಹರಾಜಿನಲ್ಲಿ ಭಾಗವಹಿಸಲು ಆಗುವುದಿಲ್ಲ. ಹಾಗಾಗಿ ಇ ಹಾರಾಜು ಜೊತೆಗೆ ನಗದು ಪಾವತಿಸಲು ಅವಕಾಶ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಕಚ್ಚಾ ರೇಷ್ಮೆಗೆ ಪ್ರೋತ್ಸಾಹಧನ, ಖಾಸಗಿ ಗೂಡು ಖರೀದಿದಾರರನ್ನು ಕಾನೂನಾತ್ಮಕವಾಗಿ ಕಡಿವಾಣ ಹಾಕುವುದು, ರೇಷ್ಮೆ ಬೆಳೆಗಾರರಿಗೆ ಇಲಾಖೆಯಿಂದ ನೀಡುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಸಕಾಳದಲ್ಲಿ ನೀಡಬೇಕು, ಗೂಡಿಗೆ ಕನಿಷ್ಟ ಬೆಲೆ ನಿಗಧಿಪಡಿಸಬೇಕು, ಇಟಾಲಿಯನ್ ಮಾದರಿ ಯಂತ್ರೋಪಕರಣಗಳನ್ನು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ನೀಡಬೇಕು, ಪ್ರತಿ 5 ಅಥವ 10 ವರ್ಷಗಳಿಗೊಮ್ಮೆ ರೀಲಿಂಗ್ ಯಂತ್ರೋಪಕರಣಗಳನ್ನು ನವೀಕರಿಸಲು ಪ್ರೋತ್ಸಾಹಧನ ನೀಡಬೇಕು, ರೀಲಿಂಗ್ ಘಟಕಗಳಲ್ಲಿ ಸೋಲಾರ್ ವಾಟರ್ ಹೀಟರ್, ಸೋಲಾರ್ ಪವರ್ ಪ್ಯಾಕ್ ಬದಲಾಯಿಸಿಕೊಳ್ಳಲು ಸಹಾಯಧನ ನೀಡುವುದು ಸೇರಿದಂತೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸಣ್ಣ ರೀಲರ್‌ಗಳಿಗೂ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಂಟಿ ನಿರ್ದೇಶಕ ಬೈರಪ್ಪ ಮಾತನಾಡಿ ರೇಷ್ಮೆ ರೀಲರ್‌ಗಳು ಹಾಗೂ ರೈತರ ಪರವಾಗಿ ತಾವು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಮಾರುಕಟ್ಟೆಯ ಸಮಸ್ಯೆಗಳು ಸೇರಿದಂತೆ ಈ ಭಾಗದ ರೈತರ ಹಾಗೂ ರೀಲರ್‌ಗಳ ಬೇಡಿಕೆಗಳನ್ನು ಪರಿಶೀಲಿಸಿ ತ್ವರಿತವಾಗಿ ಕ್ರಮ ಜರುಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ರೇಷ್ಮೆ ಮಾರುಕಟ್ಟೆ ಉಪ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಸೈಯದ್ ಯೂಸೂಫ್, ಗೌರವಾಧ್ಯಕ್ಷ ಅಕ್ಮಲ್‌ಸಾಬ್, ಕೆ.ಆನಂದಕುಮಾರ್, ರಾಮಕೃಷ್ಣ ಸೇರಿದಂತೆ ರೀಲರ್‌ಗಳು ಹಾಜರಿದ್ದರು.