Sidlaghatta : ಮತದಾರರು ನೇರವಾಗಿ ಮತ ಹಾಕುವಂತ ಎಲ್ಲ ಹಂತದ ಚುಣಾವಣೆಗಳಲ್ಲೂ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆದ ಇಒ ಜಿ.ಮುನಿರಾಜ ತಿಳಿಸಿದರು.
ನಗರದಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಹಾಗೂ ರೇಷ್ಮೆ ಬೆಳೆಗಾರರಿಗೆ ಮತದಾನದ ಮಹತ್ವದ ಬಗ್ಗೆ ಸೋಮವಾರ ಜಾಗೃತಿ ಮೂಡಿಸಿ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ನಮ್ಮ ಒಂದು ಮತ ಹಾಕದಿದ್ದರೆ ಏನಂತೆ ಎಂದು ಕೆಲಸ ಕಾರ್ಯಗಳಲ್ಲಿ ತೊಡಗುವುದು ಬಹಳ ಅಪಾಯಕಾರಿ ಬೆಳವಣಿಗೆ. ಎಲ್ಲರೂ ತಪ್ಪದೆ ಮತ ಹಾಕಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ನಾಗರೀಕರಾದ ನಾವು ನಮ್ಮ ಕರ್ತವ್ಯವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.
ಇದೀಗ ನಡೆಯುವ ಸಂಸತ್ ಚುನಾವಣೆಯಲ್ಲಿ ಎಲ್ಲ ರೀಲರುಗಳು, ರೇಷ್ಮೆ ಬೆಳೆಗಾರರು ತಪ್ಪದೆ ಕಡ್ಡಾಯವಾಗಿ ಮತ ಹಾಕಿ ನಿಮ್ಮ ನೆಚ್ಚಿನ ಪಕ್ಷ, ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಯಾವುದೆ ಒತ್ತಡ ಆಸೆ ಆಮಿಷಗಳಿಗೆ ಮಣಿದು ಮತ ಚಲಾಯಿಸಬೇಡಿ ಎಂದು ಮನವಿ ಮಾಡಿದರು.
ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೀಲರುಗಳು, ರೇಷ್ಮೆ ಬೆಳೆಗಾರರು ಹಾಜರಿದ್ದರು. ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.