Sidlaghatta : ಶಿಡ್ಲಘಟ್ಟ ನಗರದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡುತ್ತ, “ಶಿವಯೋಗಿ ಸಿದ್ದರಾಮೇಶ್ವರರು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದು, ಅಂತರ್ಜಾತಿ ವಿವಾಹಕ್ಕೆ ಒತ್ತಡ ನೀಡಿದ ಮಹಾತ್ಮರು. ಅವರು 68 ಸಾವಿರ ವಚನಗಳನ್ನು ರಚಿಸಿ, ಸಮಾಜ ಸುಧಾರಣೆಗೆ ಕಾರಣಿಯಾದ ವಚನ ಕ್ರಾಂತಿಯನ್ನು ಆರಂಭಿಸಿದರು. ತಮ್ಮ ಯೌವ್ವನದಲ್ಲೇ ಅವರು ಸಮಾಜಮುಖಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸೊಲ್ಲಾಪುರದಲ್ಲಿ ಕೆರೆಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಿಸಿ, ಅನ್ನದಾನ ನಡೆಸಿ, ಜನರಲ್ಲಿನ ಕಂದಾಚಾರ ಹಾಗೂ ಮೌಢ್ಯತೆಯನ್ನು ನಿವಾರಿಸುವ ಮೂಲಕ ಸಮಾಜವನ್ನು ಉದ್ಧರಿಸಲು ಶ್ರಮಿಸಿದರು. ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು” ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಅವರು ಮಾತನಾಡಿ, “ಸಮಾಜದ ಎಲ್ಲಾ ವರ್ಗದವರು ಸಿದ್ದರಾಮೇಶ್ವರರ ಜೀವನವನ್ನು ಅಧ್ಯಯನ ಮಾಡುವ ಮೂಲಕ ಅವರ ವಚನಗಳಿಂದ ಪ್ರೇರಣೆ ಪಡೆಯಬಹುದು. ಹನ್ನೆರಡನೇ ಶತಮಾನದ ಕಾಲದ ನೊಳಂಬ ರಾಜರು ಸಿದ್ದರಾಮೇಶ್ವರರನ್ನು ಗುರುವಾಗಿ ಸ್ವೀಕರಿಸಿ, ಅವರ ಆದರ್ಶಗಳನ್ನು ಅನುಸರಿಸಿದರೆಂದರೆ, ಅವರ ಮಹತ್ವವನ್ನು ತಿಳಿದುಕೊಳ್ಳಬಹುದು. ಈ ಆದರ್ಶಗಳು ಇಂದು ಯುವಪೀಳಿಗೆಗೆ ಮಾದರಿಯಾಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲ್ಲೂಕು ಭೋವಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಗೌರವಾಧ್ಯಕ್ಷ ಚಲಪತಿ, ಉಪಾಧ್ಯಕ್ಷ ರಾಜಪ್ಪ, ನಗರಸಭೆ ಸದಸ್ಯ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶಮೂರ್ತಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.