ಶಿಡ್ಲಘಟ್ಟ ನಗರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಮತ್ತು ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀನಗರೇಶ್ವರಸ್ವಾಮಿ ದೇವಾಲಯದಲ್ಲಿ ಗಂಗಾಪೂಜೆ ಸಲ್ಲಿಸಿ ತಾಲ್ಲೂಕಿನ ವಿವಿಧ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಿಸಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ಈ ಭಾಗದಲ್ಲಿ ಗಂಗಾಜಲ ಸಿಗುವುದಿಲ್ಲ, ಈ ಜಲವು ಹರಿದ್ವಾರ ಹಾಗೂ ಕಾಶಿಯಲ್ಲಿ ಮಾತ್ರ ಸಿಗುವ ಕಾರಣ, ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ನೆರವಿನಿಂದ ಬೆಂಗಳೂರಿಗೆ ಬಂದಿದ್ದು, ಅಲ್ಲಿಂದ ನಾವು ತರಸಿದ್ದೇವೆ. ಈ ರೀತಿಯಾಗಿ ಕಳೆದ ಮೂರು ವರ್ಷಗಳಿಂದ ನಾವು ಗಂಗಾಜಲ ತರಿಸುತ್ತಿದ್ದೇವೆ ಎಂದು ತಿಳಿಸಿದರು.
ಮುಕ್ತಿ ದೊರೆಯಲು ಗಂಗೆಯ ಒಂದು ತೊಟ್ಟು ಸಾಕು. ಗಂಗಾ ಸ್ನಾನ ತುಂಗಾ ಪಾನ. ಪವಿತ್ರ ಗಂಗೆ ಸೇವನೆಯಿಂದ ಸಕಲ ಪಾಪಗಳು ನಾಶವಾಗುತ್ತವೆ. ಅಲ್ಲದೆ ಇದಕ್ಕೆ ಔಷಧ ಗುಣಗಳಿವೆ. ಈ ರೀತಿಯ ಪವಿತ್ರವಾದ ಜಲದಿಂದ ಜನರ ಕಷ್ಟಗಳು ದೂರವಾಗಲಿ, ಎಲ್ಲರಿಗೂ ಆರೋಗ್ಯವನ್ನು ಶಿವ ದಯಪಾಲಿಸಲಿ ಹಾಗೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ ಗಂಗಾಜಲವನ್ನು ವಿತರಿಸುತ್ತಿದ್ದೇವೆ.
ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದರೆ ನಾಡಿಗೆ ಮಳೆ ಬೆಳೆಯಾಗಿ ನಮ್ಮ ನಾಡು ಸುಭೀಕ್ಷೆಯಿಂದ ಇರುತ್ತದೆ ಎಂದು ಹಿರಿಯರ ಮಾತಿದೆ. ಶಿವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಿ ಎಲ್ಲರೂ ಆ ದೇವರ ಕೃಪೆಗೆ ಪಾತ್ರರಾಗೋಣ ಎಂದು ಜನತೆಗೆ ಶುಭ ಕೋರಿದರು.
ನಗರ್ತ ಮಂಡಳಿ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಮಹಾಶಿವರಾತ್ರಿ ಪ್ರಯುಕ್ತ ಕಸಾಪ, ಕಜಾಪ ಮತ್ತು ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ಗಂಗಾಜಲವನ್ನು ವಿತರಿಸುತ್ತಿರುವುದು ಉತ್ತಮ ಸೇವಾ ಕಾರ್ಯ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಸಾಪ ನಿ.ಪೂ.ಕಾರ್ಯದರ್ಶಿ ಎಸ್.ಸತೀಶ್, ಕಸಾಪ ಸದಸ್ಯ ರಮೇಶ್, ವೇ.ಬ್ರ.ಶ್ರೀ. ರಾಮಮೋಹನ ಶಾಸ್ತ್ರಿ, ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ನಾಗರಾಜ್,ಖಜಾಂಚಿ ಸುರೇಶ ಬಾಬು, ಕೆ.ಎಂ.ವಿನಾಯಕ ಮತ್ತು ಶಿವ ದೇವಾಲಯಗಳ ಅರ್ಚಕರು ಹಾಜರಿದ್ದರು.