Sidlaghatta : ನಾನಾ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಅರ್ಹರಿಗೆ ಸಿಗಬೇಕಾದ ಸವಲತ್ತುಗಳು ದುರುಪಯೋಗ ಆಗಿವೆ. ಆದರೆ ಇನ್ನು ಮುಂದೆ ಆ ರೀತಿ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಡಿ.ದೇವರಾಜು ಅರಸು ಅಭಿವೃದ್ದಿ ನಿಗಮದಿಂದ ಹೊಲಿಗೆ ಯಂತ್ರ ವಿತರಣೆ ಹಾಗೂ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿಂದೆ ಆಗಿದ್ದಾಗಿದೆ. ಇನ್ನು ಮುಂದೆಯಾದರೂ ಆ ರೀತಿ ಆಗದಂತೆ ನಾವು ನೀವೆಲ್ಲರೂ ಎಚ್ಚರಿಕೆವಹಿಸಿ ಕಾರ್ಯನಿರ್ವಹಿಸಬೇಕೆಂದರು.
ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಬಳಸುವ ಹಣ ಸಾರ್ವಜನಿಕರು ಕಟ್ಟುವ ತೆರಿಗೆ ಹಣ. ಹಾಗಾಗಿ ಈ ಹಣವನ್ನು ಯಾವುದೆ ರೀತಿಯಲ್ಲಿ ದುರುಪಯೋಗವಾಗದಂತೆ ಅರ್ಹರಿಗೆ ಸೇರುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಸಾಗಬೇಕೆಂದರು.
ದೇವರಾಜು ಅರಸು ಅಭಿವೃದ್ದಿ ನಿಗಮ ಸೇರಿದಂತೆ ನಾನಾ ಇಲಾಖೆಗಳ ಯೋಜನೆಗಳ ಬಗ್ಗೆ ಸಾಕಷ್ಟು ಮಂದಿಗೆ ಮಾಹಿತಿ ಇಲ್ಲ. ಬಹಳಷ್ಟು ಮಂದಿ ನನ್ನ ಬಳಿ ಬಂದು ಯೋಜನೆಗಳ ಬಗ್ಗೆ ಕೇಳುತ್ತಾರೆ ಮತ್ತು ಬೇಡಿಕೆ ಇಡುತ್ತಾರೆ. ಇವರೆಲ್ಲರಿಗೂ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದರು.
ಆದ್ದರಿಂದ ಅಧಿಕಾರಿಗಳು ಇಲಾಖೆಗಳ ಯೋಜನೆಗಳ ಬಗ್ಗೆ ಇನ್ನಷ್ಟು ಪ್ರಚಾರ ಮಾಡಿ ಎಲ್ಲ ಅರ್ಹರಿಗೂ ಸವಲತ್ತುಗಳು ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಡಿ.ದೇವರಾಜು ಅರಸು ಅಭಿವೃದ್ದಿ ನಿಗಮದಿಂದ 52 ಹೊಲಿಗೆ ಯಂತ್ರಗಳನ್ನು ಹಾಗೂ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ 20 ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಸಿಡಿಪಿಒ ವಿದ್ಯಾ ವಸ್ತ್ರದ್, ಡಿ.ದೇವರಾಜು ಅರಸು ಅಭಿವೃದ್ದಿ ನಿಗಮದ ಶಿವಾನಂದರೆಡ್ಡಿ, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಗದೀಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು ಹಾಜರಿದ್ದರು.