Sidlaghatta : ನ್ಯಾಯಾಲಯಗಳಲ್ಲಿ ಬಾಕಿ ಇದ್ದು ಇತ್ಯರ್ಥಪಡಿಸಲು ಅವಕಾಶವಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಪರಸ್ಪರ ಸಹಕಾರದೊಂದಿಗೆ ಸೆಪ್ಟೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಮೆಗಾ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಅವರು ತಿಳಿಸಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸೆಪ್ಟೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಅವರು ಮಾತನಾಡಿದರು.
ಕಾನೂನು ಸೇವಾ ಸಮಿತಿ ಮೂಲಕ ನಿರಂತರವಾಗಿ ರಾಜಿ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾ ಬರಲಾಗುತ್ತಿದೆ, ಇದರ ಹೊರತಾಗಿಯೂ ವಿಶೇಷವಾಗಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಗಳನ್ನು ಆಯೋಜಿಸಿ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ.
ಚೆಕ್ಕು ಅಮಾನ್ಯ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ಹಾಗೂ ಸಿವಿಲ್ ಪಿಂಚಣಿ ಪ್ರಕರಣಗಳನ್ನು ರಾಜಿ ಮೂಲಕ ಇಬ್ಬರೂ ಕಕ್ಷಿದಾರರ ಮನವೊಲಿಸಿ ಇತ್ಯರ್ಥ ಪಡಿಸಲಾಗುವುದು. ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಉಭಯ ಕಕ್ಷಿದಾರರು ರಾಜಿ ಮಾಡಿಕೊಳ್ಳಲು ಸೂಕ್ತ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು ಎಂದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗುವುದರಿಂದ ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧವ್ಯ ಉಳಿದು ವಿವಾದವು ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನೂ ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ. ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಸಂರ್ಪೂವಾಗಿ ಮರುಪಾವತಿ ಮಾಡಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಸಮ್ಮತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಲೋಕ ಅದಾಲತ್ ವಿಶೇಷ ಅವಕಾಶವಾಗಿರುತ್ತದೆ ಎಂದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ. ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗಿ ಇಬ್ಬರಿಗೂ ನ್ಯಾಯ ದೊರೆತಂತಾಗಿ ನೆಮ್ಮದಿಯೂ ದೊರೆಯುತ್ತದೆ. ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯವೂ ಉಳಿತಾಯವಾಗಿ ಆ ಸಮಯವನ್ನು ಬಾಕಿ ಇರುವ ಇತರೆ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ನೀಡಲು ಸಹಕಾರಿಯಾಗುತ್ತದೆ. ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವುದರಿಂದ ಕಕ್ಷಿದಾರರ ನಡುವಿನ ವೈಮನ್ಯಸ್ಸು,ಭಿನ್ನಾಭಿಪ್ರಾಯ, ದ್ವೇಷ ಕಡಿಮೆಯಾಗಿ ಇಬ್ಬರ ನಡುವೆ ಸಾಮರಸ್ಯ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯೂ ನಿರ್ಮಾಣವಾಗುತ್ತದೆ ಎಂದರು.
ಸೆಪ್ಟೆಂಬರ್ 14 ರ ಅದಾಲತ್ ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಈ ವೇಳೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಭಾಸ್ಕರ್ ಹಾಜರಿದ್ದರು.