Nadipinayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ಪ್ರೌಢಶಾಲೆಯಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯಗಳ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕುಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಗಳನ್ನು ಉದ್ಘಾಟಿಸಿ ಕ್ಷೇತ್ರಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಬಾಲ್ಯದ ದಿಸೆಯಿಂದಲೇ ವೈಜ್ಞಾನಿಕ ಮನೋಭಾವನೆಯು ಬೆಳೆಯಬೇಕು. ಎಲ್ಲವನ್ನೂ ವೈಜ್ಞಾನಿಕವಾಗಿ ಚಿಂತನೆಗೊಳಪಡಿಸಿ ಆಚರಣೆಗೆ ತಂದುಕೊಳ್ಳಬೇಕು. ವಿಜ್ಞಾನವನ್ನು ಚೆನ್ನಾಗಿ ಅರಿತಾಗ ಸಮಾಜದಲ್ಲಿನ ಅನೇಕ ಮೌಡ್ಯಾಚರಣೆಗಳನ್ನು ತೊಡೆದುಹಾಕಬಹುದು. ಯುವವಿಜ್ಞಾನಗಳ ಅಗತ್ಯ ಇಂದು ರಾಷ್ಟ್ರಕ್ಕೆ ಅಗತ್ಯವಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎನ್.ಆರ್.ಕೃಷ್ಣಮೂರ್ತಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತೀಯ ಋಷಿಗಳು ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಭಾರತೀಯ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ಇತರೆ ದೇಶದ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ ಮಾತನಾಡಿ, ವೈಜ್ಞಾನಿಕ ಅಂಶಗಳನ್ನು ಅರಿತು ಬದುಕಿನ ಪ್ರತಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆಯೊಂದಿಗೆ ವಿಜ್ಞಾನಪ್ರಯೋಗಗಳನ್ನು ಮಾಡುವ ಮೂಲಕ ಅನ್ವೇಷಣಾ ಗುಣವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮೂಲವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕಾದ ಅಗತ್ಯವಿದೆ. ವಿಜ್ಞಾನವೆಂಬುದು ಎರಡು ಅಲುಗಿನ ಕತ್ತಿಯಾಗಿದ್ದು, ಅದನ್ನು ದೇಶದ ಅಭಿವೃದ್ದಿಗೂ, ಪ್ರಪಂಚ ವಿನಾಶಕ್ಕೂ ಬಳಸಬಹುದು. ಮೌಢ್ಯಗಳ ಆಚರಣೆ, ಮೂಢನಂಬಿಕೆಗಳ ಅಳವಡಿಕೆಯಿಂದ ಸಾಕಷ್ಟು ಮಂದಿ ಮೋಸಹೋಗುತ್ತಿದ್ದಾರೆ. ಜ್ಯೋತಿಷ್ಯ, ಖಗೋಳದಂತಹ ವಿಷಯಗಳನ್ನು ವೈಜ್ಞಾನಿಕವಾಗಿ ಅರಿಯಬೇಕು ಎಂದರು.
ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ, ಬಯೋಸೈನ್ಸ್ ಮತ್ತು ಬಯೋಕೆಮಿಸ್ಟ್ರಿ, ಪರಿಸರ ವಿಜ್ಞಾನ, ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಮಾದರಿಗಳನ್ನು ಪ್ರದರ್ಶಿಸಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್, ನಗದು ಬಹುಮಾನ ಮತ್ತು ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಣಸಂಯೋಜಕಿ ಪರಿಮಳ, ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ್, ತೀರ್ಪುಗಾರರಾದ ಲಕ್ಷ್ಮಿಪ್ರಸಾದ್, ಶ್ರೀನಿವಾಸ್, ನಳಿನಿ, ಸವಿತಾ, ನವೀನ್‌ಕುಮಾರ್, ಶಿಕ್ಷಕ ಉಮಾಶಂಕರ್, ದ್ಯಾವಪ್ಪ, ಚೌಡರೆಡ್ಡಿ, ವಿವಿಧ ಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಹಾಜರಿದ್ದರು.