Sidlaghatta : ದಸರಾ ಮಧ್ಯಂತರ ರಜೆಯ ನಂತರ ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೋಮವಾರ ಪುನರಾರಂಭಗೊಂಡವು.
ತಾಲ್ಲೂಕಿನೆಲ್ಲೆಡೆ ಬಹುತೇಕ ಖಾಸಗಿ ಶಾಲೆಗಳೂ ಇಂದೇ ಆರಂಭಗೊಂಡರೂ ಕೆಲವು ಶಾಲೆಗಳು ಮಾತ್ರ ಕಳೆದ ಶುಕ್ರವಾರದಿಂದಲೇ ಚಟುವಟಿಕೆಗಳಮನ್ನು ಆರಂಭಿಸಿದ್ದವು.
ಗಾಂಧಿಜಯಂತಿ ಆಚರಿಸಿ ಇದೇ ತಿಂಗಳ 3 ರಿಂದ 20 ರವರೆಗೆ ಮಾತ್ರ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಲಾಗಿತ್ತು.
ಸ್ವಚ್ಚತೆ, ಲೇಖನಸಾಮಗ್ರಿಗಳ ವಿತರಣೆ:
ಪುನರಾರಂಭದ ಮೊದಲ ದಿನ ಶಾಲೆಯ ಕೊಠಡಿಗಳು ಮತ್ತು ಆವರಣದ ಸ್ವಚ್ಚತೆ, ವಿದ್ಯಾರ್ಥಿಗಳಿಗೆ ಎರಡನೇ ಸೆಮಿಸ್ಟರ್ ಅವಧಿಯ ಉಚಿತ ಪಠ್ಯಪುಸ್ತಕಗಳ ವಿತರಣೆ ಲೇಖನಸಾಮಗ್ರಿಗಳ ವಿತರಣೆ ಕಾರ್ಯವು ಸರ್ಕಾರಿ ಶಾಲೆಗಳಲ್ಲಿ ನಡೆದವು.
ವಿದ್ಯಾರ್ಥಿಗಳ ಹಾಜರಾತಿ ಮೊದಲ ದಿನವಾದ್ದರಿಂದ ಸ್ವಲ್ಪ ಕಡಿಮೆ ಇದ್ದರೂ ಕ್ಷೀರಭಾಗ್ಯ, ಬಿಸಿಯೂಟ, ಮೊಟ್ಟೆ ಮತ್ತು ಚಿಕ್ಕಿ ವಿತರಣೆ ಕಾರ್ಯವು ಹಿಂದಿನಂತೆಯೇ ಮಾಮೂಲಿನಂತೆ ಆರಂಭವಾದವು.
ಪುನರಾವರ್ತನೆ ಶುರು:
ದಸರಾ ರಜೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳು ಹೋಂವರ್ಕ್, ಯೋಜನೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿದ್ದು, ಮೊದಲ ಸೆಮಿಸ್ಟರ್ ಅವಧಿಯ ಪಾಠಗಳ ಪುನರಾವರ್ತನೆ ಕಾರ್ಯವನ್ನು ಈ ವಾರದಾದ್ಯಂತ ನಡೆಸಲಾಗುವುದು.
ಮೊದಲ ಸೆಮಿಸ್ಟರ್ ಅವಧಿಯ ಕಲಿಕಾ ಪ್ರಗತಿ ಪರೀಕ್ಷಿಸಲು ಸೆಪ್ಟೆಂಬರ್‌ನಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಸಲಾಗಿದೆ.
ಕಲಿಕಾಪ್ರಗತಿಯ ಬಗ್ಗೆ ಪೋಷಕರೊಂದಿಗೆ ಸಮಾಲೋಚಿಸಲು ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇದೇ ತಿಂಗಳ 29 ರಂದು, ಸರ್ಕಾರಿ ಪ್ರೌಢಶಾಲೆಗಳಲ್ಲಿ 30 ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ, ತಾಯಂದಿರ, ಪೋಷಕರ ಸಭೆ ನಡೆಸಲಾಗುವುದು ಎಂದು ಸುಗಟೂರು ಶಾಲೆಯ ಮುಖ್ಯ ಶಿಕ್ಷಕ ರುದ್ರೇಶಮೂರ್ತಿ ತಿಳಿಸಿದರು.
ಪಠ್ಯೇತರ ಚಟುವಟಿಕೆಗಳು:
ತಾಲ್ಲೂಕು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ, ಕ್ರೀಡಾಕೂಟ, ಶೈಕ್ಷಣಿಕ ಪ್ರವಾಸ ಮತ್ತಿತರ ಚಟುವಟಿಕೆಗಳು ಎರಡನೇ ಸೆಮಿಸ್ಟರ್ ನಲ್ಲಿ ನಡೆಯಬೇಕಿದೆ. ಈ ನಡುವೆ ಶಿಕ್ಷಕರ ಕಲ್ಯಾಣನಿಧಿಯಿಂದ ಶಿಕ್ಷಕರಿಗಾಗಿ ಅನೇಕ ಸಹಪಠ್ಯಚಟುವಟಿಕೆಗಳನ್ನು ನಡೆಸಿ ಪ್ರೋತ್ಸಾಹಿಸಲು ಇಲಾಖೆಯು ಜ್ಞಾಪನ ಹೊರಡಿಸಿದೆ.
ಜಿಲ್ಲೆಯ ಕೆಲವು ಜಿಲ್ಲೆಗಳಲ್ಲಿ ಕಲಿಕಾ ನಷ್ಟವನ್ನು ತುಂಬಲು ಅನುಕೂಲವಾಗುವಂತೆ ಮರುಸಿಂಚನ ಕಾರ್ಯಕ್ರಮವನ್ನು ಜಾರಿಗೊಳಿಸಲು ಶಿಕ್ಷಕರಿಗೆ ಈಗಾಗಲೇ ತರಬೇತಿ ನೀಡಿದ್ದು 22 ರಿಂದ ಚಟುವಟಿಕೆಗಳು ಆರಂಭವಾಗಲು ಈಗಾಗಲೇ ವೇಳಾಪಟ್ಟಿ ನಿಗದಿ ಮಾಡಲಾಗಿದೆ.
ಸಮಾಜದ ಪಾತ್ರ ಹಿರಿದು:
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮಾಜ, ಪೋಷಕರ ಪಾತ್ರ ಮಹತ್ವದ್ದು, ತಾವು ಓದಿ ಕಲಿತ ಶಾಲೆಗೆ ಬಡವಿದ್ಯರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಏನಾದರೂ ಕೊಡುಗೆಗಳನ್ನು ನೀಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು.
ಸರ್ಕಾರವು ಒದಗಿಸುವ ಸವಲತ್ತುಗಳೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಔನತ್ಯವು ಪೋಷಕರು, ಹಿರಿಯರನ್ನು ಅವಲಂಬಿಸಿರುತ್ತದೆ ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಲೇಖನಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ವಿದ್ಯಾರ್ಥಿಗಳ ಸತತ ಅಭ್ಯಾಸ ಪರಿಶ್ರಮದ ಮೂಲಕ ಕಲಿತ ವಿಷಯವು ಧಾರಣೆಗೊಂಡು ಶಾಶ್ವತ ಕಲಿಕೆ ಉಂಟಾಗುತ್ತದೆ.
ಮಕ್ಕಳಲ್ಲಿ ಕಲಿಕಾ ಪಠ್ಯಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಬೆಳವಣಿಗೆಯೂ ಅಗತ್ಯವಿದೆ. ವಿದ್ಯಾರ್ಥಿಗಳ ಕಲಿಕೆಯ ಬಗೆಗೆ ಪೋಷಕರು ಆಗಿಂದಾಗ್ಗೆ ಶಾಲೆಗಳಿಗೆ ಭೇಟಿನೀಡಿ ಶಿಕ್ಷಕರೊಂದಿಗೆ ಸಮಾಲೋಚಿಸಬೇಕು. ವಿದ್ಯಾರ್ಥಿಗಳ ನಿರಂತರ ಹಾಜರಾತಿ, ಮನೆಯಲ್ಲಿ ಮಕ್ಕಳ ಅಭ್ಯಾಸದ ಬಗ್ಗೆ ಪೋಷಕರು ಗಮನವಹಿಸಬೇಕು” ಎಂದರು.
ವಿದ್ಯಾರ್ಥಿಗಳಿಗೆ ಸಿಹಿನೀಡಿ ಸ್ವಾಗತಿಸಿಕೊಳ್ಳಲಾಯಿತು. ಉಚಿತ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.
ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಟಿ.ಎಂ.ಮಧು, ಶಿಕ್ಷಕಿ ತಾಜೂನ್, ಮತ್ತಿತರರು ಹಾಜರಿದ್ದರು.