Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸಾದಲಿ-ಪೆರೇಸಂದ್ರ ಮಾರ್ಗದ ಜಿಲ್ಲಾ ಮುಖ್ಯರಸ್ತೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4.2 ಕಿ.ಮೀ ರಸ್ತೆ ಅಭಿವೃದ್ಧಿಗಾಗಿ 11 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ವಿಶೇಷ ಅನುದಾನದಡಿ ಬಿಡುಗಡೆಗೊಳಿಸಲು ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.
ಸಾದಲಿ ಹೊಸ ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಜಿ.ವಿ. ತಿಮ್ಮರಾಜು ಮಾತನಾಡಿ, “ಸಾದಲಿ ಮುಖ್ಯ ರಸ್ತೆ ಜಿಲ್ಲಾ ಮುಖ್ಯರಸ್ತೆಗೆ ಒಳಪಟ್ಟಿದ್ದು, ಇದರ ಕೆಲ ಭಾಗ ಶಿಡ್ಲಘಟ್ಟ ವ್ಯಾಪ್ತಿಗೆ ಸೇರಿದೆ. ಈ ರಸ್ತೆ ಈಗಿನ ಪರಿಸ್ಥಿಯಲ್ಲಿ ತುಂಬಾ ಕಿರಿದಾಗಿದೆ. ಇದನ್ನು 42*42 ಅಡಿ ಅಗಲೀಕರಿಸಲು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳದೆ ಕಾಲ ಹರಣ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರೂ ಕೂಡ ಶಾಶ್ವತ ಪರಿಹಾರ ನೀಡದೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಪರಿಣಾಮ, ವಾಹನ ಸಂಚಾರ ದುಸ್ತರಗೊಂಡಿದ್ದು, ಚಿಂತಾಮಣಿ-ಬಾಗೇಪಲ್ಲಿ ರಾಜ್ಯ ಹೆದ್ದಾರಿ (234) ಮೂಲಕ ಬಸ್, ಟೆಂಪೋ ಹಾಗೂ ಇತರೆ ವಾಹನಗಳು ಸಾದಲಿ ಶೀಥಲೀಕರಣ ಕೇಂದ್ರದ ಬಳಿ ನಿಲ್ಲಿಸಿ, ಪ್ರಯಾಣಿಕರು ಸುಮಾರು 1 ಕಿ.ಮೀ ದೂರ ಹಿಂತಿರುಗಿ ಓಡಾಡಬೇಕಾಗುತ್ತಿರುವ ದುಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದಿಸಿದರು.
ಅನುದಾನ ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲದೆ ಚರಂಡಿ ನಿರ್ಮಾಣವೂ ಅವೈಜ್ಞಾನಿಕವಾಗಿದೆ ಎಂದು ಅವರು ಆರೋಪಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸ್ಪಷ್ಟ ಉತ್ತರ ನೀಡುವವರೆಗೆ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಧರಣಿಯಲ್ಲಿ ಎನ್.ವಿ. ಶ್ರೀನಿವಾಸ್, ನರಸಿಂಹಮೂರ್ತಿ, ಬಾಲು, ಮಂಜುನಾಥ್, ಮಂಜುಳಾ, ಸುರೇಂದ್ರ, ತಿರುಮಲಪ್ಪ, ರಾಮಕೃಷ್ಣಪ್ಪ, ವಿ. ಸುರೇಶ್, ಎ.ಜಿ. ನಾರಾಯಣಸ್ವಾಮಿ, ದಾಸಪ್ಪ, ಮುನಿಯಪ್ಪ, ನರಸಿಂಹಪ್ಪ, ಸುನಿಲ್, ಅಂಜಿನಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದರು.