Cheemangala, Sidlaghatta : ರೂಬಿಕ್ಸ್ ಕ್ಯೂಬ್ ನಂತಹ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಗಣಿತ ಸಮಸ್ಯೆ ಬಿಡಿಸುವ ಸಾಮರ್ಥ್ಯ, ಮಾನಸಿಕ ಶಿಸ್ತು ವೃದ್ಧಿಯಾಗುತ್ತದೆ. ಮೊಬೈಲ್ ಬಳಕೆಯಂತಹ ಚಟಗಳನ್ನು ದೂರಮಾಡಿ ಮಕ್ಕಳನ್ನು ಕಲಿಕೆಗೆ ದೂಡಲು ಚಟುವಟಿಕೆ ಆಧಾರಿತ ಕಲಿಕೆ, ಬೋಧನೆಯ ಅಗತ್ಯವಿದೆ ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಬೆಂಗಳೂರಿನ ಪ್ರಜ್ಞಾ ಮ್ಯಾಥೆಮ್ಯಾಟಿಕ್ಸ್ ವತಿಯಿಂದ ಹಮ್ಮಿಕೊಂಡಿದ್ದ ರೂಬಿಕ್ಸ್ ಕ್ಯೂಬ್ ತರ್ಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೆದುಳನ್ನು ಹೆಚ್ಚು ಕ್ರಿಯಾಶೀಲವಾಗಿಸಿ ಚುರುಕಾಗಿಡಲು, ಮಾನಸಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಬೇಕು. ಮಕ್ಕಳಿಗೆ ಗಣಿತವು ಕಷ್ಟದ ವಿಷಯವಾಗದೇ ಇಷ್ಟಪಟ್ಟು ಕಲಿಯುವಂತಾಗಬೇಕು. ಮೂಲ ವಿಜ್ಞಾನ, ಮೂಲಗಣಿತದ ಮೂಲ ಪರಿಕಲ್ಪನೆಗಳನ್ನು ಕಲಿಸಬೇಕಿದೆ. ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ, ಸಮಸ್ಯೆ ಪರಿಹರಿಸಬಲ್ಲ ಕೌಶಲಗಳು ವೃದ್ಧಿಯಾಗಲು ರೂಬಿಕ್ಸ್‌ಕ್ಯೂಬ್ ಸಹಕಾರಿಯಾಗಿವೆ ಎಂದರು.
ಮುಖ್ಯಶಿಕ್ಷಕ ಎಸ್.ಶಿವಶಂಕರ್ ಮಾತನಾಡಿ, ಮಕ್ಕಳಲ್ಲಿ ಸಮಯಪ್ರಜ್ಞೆ, ಕಲಿಕೆಯಲ್ಲಿ ಬದ್ಧತೆ, ಪ್ರಾಮಾಣಿಕತೆಯಂತಹ ಗುಣಗಳು ಬೆಳೆಯಬೇಕು. ಚಟುವಟಿಕೆಗಳ ಮೂಲಕ ಗಣಿತವನ್ನು ಪರಿಕಲ್ಪನೆಗಳ ನಡುವೆ ಸಹಸಂಬಂಧವಿರಿಸಿ ಬೋಧಿಸಿ ಬಳಕೆಯ ಮೌಲ್ಯಗಳನ್ನು ಬೆಳೆಸಬೇಕಿದೆ. ಜ್ಞಾಪಕಶಕ್ತಿ ವೃದ್ಧಿಯಾಗಿ ಕೈ-ಕಣ್ಣುಗಳ ಸಮನ್ವಯ ಸಾಧಿಸಲು ರೂಬಿಕ್ಸ್‌ಕ್ಯೂಬ್ ತರ್ಕ ಶಿಬಿರ ಸಹಕಾರಿಯಾಗಿದೆ ಎಂದರು.
ಪ್ರಜ್ಞಾ ಗಣಿತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮತ್ತು ಗಣಿತ ಮಾರ್ಗದರ್ಶಿ ಎಂ.ಮಹೇಶ್ ಮಾತನಾಡಿ, ಗಣಿತ ಮತ್ತು ತಾರ್ಕಿಕ ಆಲೋಚನೆಗಳು ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದಲೇ ತಾರ್ಕಿಕ ಆಲೋಚನೆ ಬೆಳೆಸುವ ರೂಬಿಕ್ಸ್ ಕ್ಯೂಬ್ ಅನ್ನು ಎಲ್ಲ ಮಕ್ಕಳೂ ಕಲಿಯಬೇಕು ಎಂದು ಹೇಳಿದರು.
ಮಕ್ಕಳು ರೂಬಿಕ್ಸ್ ಕ್ಯೂಬ್ ಅನ್ನು ಹೇಗೆ ಪರಿಹರಿಸಬೇಕೆಂದು ಕಲಿಯುವುದರಿಂದ ಹಲವು ಪ್ರಯೋಜನಗಳಿವೆ. ಮುಖ್ಯವಾಗಿ ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ವೃದ್ಧಿಯಾಗುತ್ತವೆ. ರೂಬಿಕ್ಸ್ ಕ್ಯೂಬ್ ಗಳು ಮಗುವಿನಲ್ಲಿ ಸ್ಪಂದನಾ ಶಕ್ತಿಯನ್ನು ಹೆಚ್ಚಿಸುತ್ತದೆ, ವೀಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸುತ್ತದೆ, ಏಕಾಗ್ರತೆ ಮತ್ತು ಸಂರಚನೆಯನ್ನು ಸುಧಾರಿಸುತ್ತದೆ, ಮನಸ್ಸನ್ನು ಕ್ರಿಯಾಶೀಲವಾಗಿರಿಸುತ್ತದೆ, ವೇಗ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ, ತಾರ್ಕಿಕ ಚಿಂತನೆ, ಸಮಯದ ಸದುಪಯೋಗ, ಮನಸ್ಸು ಮತ್ತು ಬೆರಳಿನ ಸಂಯೋಜನೆ ಬೆಳೆಯುತ್ತದೆ ಮತ್ತು ಒಟ್ಟಾರೆಯಾಗಿ ಮಗುವಿನ ಮನಸ್ಸು ವಿಕಾಸವಾಗುತ್ತದೆ ಎಂದರು.
ಶಿಕ್ಷಕ ಡಾ. ಎಂ. ಶಿವಕುಮಾರ್ ಮಾತನಾಡಿ, ಮೂಲತಃ ಸಾಫ್ಟ್ ವೇರ್ ಎಂಜಿನಿಯರ್ ಆದ ಹೆಬ್ಬಾಳದ ಮಹೇಶ್ ಅವರು ಗಣಿತವನ್ನು ಸರಳವಾಗಿ ಕಲಿಸಲು ಹಲವು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಗಣಿತ ಮತ್ತು ವಿಜ್ಙಾನವನ್ನು ಕಲಿಸಲು ಇವರು ಹೆಬ್ಬಾಳದ ಸುತ್ತಮುತ್ತಲಿನ ಹಲವು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಪ್ರಜ್ಙಾ ಮ್ಯಾಥ್ಮೆಟಿಕ್ಸ್ ಸಂಸ್ಥೆಯ ಅಡಿಯಲ್ಲಿ ಇವರು ಹಲವು ಗಣಿತ ಕಲಿಕಾ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದಾರೆ. ಇವರು ನಾಡಿನೆಲ್ಲೆಡೆ ರೂಬಿಕ್ಸ್ ಕ್ಯೂಬ್ ತರಬೇತಿಗಳನ್ನು ಆಯೋಜಿಸುತ್ತಿರುತ್ತಾರೆ. ಇವರು ನಮ್ಮ ಶಾಲೆಗೆ ಬಂದು ನಮ್ಮ ಮಕ್ಕಳೊಂದಿಗೆ ಬೆರೆತಿರುವುದು ನಮ್ಮ ಮಕ್ಕಳ ಪುಣ್ಯ ಎಂದರು.
ಕಾರ್ಯಾಗಾರದಲ್ಲಿ ನವೋದಯ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ, ಶ್ರೀ ಸಾಯಿ ನಿಧಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಕಿರಣ್ಮಯಿ, ಶಿಕ್ಷಕರಾದ ನವೀನ್ ಕುಮಾರ್, ಎಮ್. ಶಿವಕುಮಾರ್, ಪಲ್ಲವಿ,ರಾಜುಗೌಡ ಹಾಜರಿದ್ದರು.