Sidlaghatta : ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿದಾಗ ಮಾತ್ರ ಅಪಘಾತ ಹಾಗು ಅದರಿಂದಾಗುವ ಜೀವಹಾನಿ ತಡೆಯಲು ಸಾಧ್ಯ ಎಂದು ನಗರಠಾಣೆ ಪಿಎಸ್ಸೈ ವೇಣುಗೋಪಾಲ್ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ-2024 ರ ಅಂಗವಾಗಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಶಾಲಾ ಕಾಲೇಜುಗಳಲ್ಲಿ ಸಂಚಾರಿ ನಿಯಮಗಳ ಪಾಲನೆ ಹಾಗೂ ಅಪಘಾತವನ್ನು ತಡೆಯುವ ಕ್ರಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿದ್ಯಾರ್ಥಿಗಳು 18 ವರ್ಷ ಪೂರ್ತಿಯಾಗುತ್ತಿದ್ದಂತೆ ವಾಹನ ಪರವಾನಿಗೆ ಪಡೆದ ನಂತರವಷ್ಟೇ ವಾಹನ ಚಾಲನೆ ಮಾಡಬೇಕೆಂದರು.
ನಮ್ಮ ಜೀವನದ ರಕ್ಷಣೆಗೆ ಒಂದಿಷ್ಟು ಸಲಹೆಗಳು ಹಾಗೂ ಮಾರ್ಗದರ್ಶನ ನೀಡುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ. ನಾವೆಲ್ಲ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಸೇರಿದಂತೆ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ತ್ರಿಬಲ್ ರೈಡ್ ಮಾಡುವುದು, ಬೈಕ್ ವೀಲಿಂಗ್ ಮಾಡುವುದು, ಪ್ರಾಣಕ್ಕೆ ಸಂಚಾಕರ ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸೈಯಿದಾ ಇಷ್ರತ್ ಮಾತನಾಡಿ, ವಾಹನ ಚಾಲನೆ ಮಾಡುವಾಗ ನಮಗೆ ಜವಾಬ್ದಾರಿ ಇರಬೇಕು. ನಮ್ಮ ಜೀವನದ ರಕ್ಷಣೆಗೆ ರಸ್ತೆ ಸುರಕ್ಷಿತ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ.ಎಲ್.ಸತೀಶ್, ಗೋಪಾಲಕೃಷ್ಣ, ಅನ್ನಪೂರ್ಣ, ಹಿರೇಮಠ, ಮಧುಸೂಧನ್, ನವೀನ್, ಪೂರ್ಣಿಮಾ, ಕುಸುಮ, ನಳಿನ, ಮುರಳಿ, ರಮಾ ಆಶಾ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.