Sidlaghatta : ಕಳೆದ ವರ್ಷ ಮುಂಗಾರು ಮಳೆಗಾಲದ ಬರದಿಂದ ಬೆಳೆ ನಷ್ಟ ಪರಿಹಾರ ಬಾಕಿಯಿದ್ದು ಅದನ್ನು ಕೂಡಲೆ ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿ ಸಾಮೂಹಿಕ ನಾಯಕತ್ವ ರೈತ ಸಂಘದ ರೈತರು ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, 2023-24ನೇ ಸಾಲಿನಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು ಸರ್ಕಾರ ಬರಗಾಲ ಘೋಷಣೆ ಮಾಡಿತ್ತು. ವಿಮೆ ಮಾಡಿಸಿದ್ದ ರಾಗಿ ಜೋಳಕ್ಕೆ ವಿಮೆಯ ಶೇ 25ರಷ್ಟು ಮಾತ್ರವೇ ಹಣ ಬಂದಿದೆ.
ಉಳಿದ ಶೇ 75ರಷ್ಟು ಹಣ ಬಾಕಿಯಿದ್ದು ಕೂಡಲೆ ಸಂಬಂಧಿಸಿದ ವಿಮೆ ಕಂಪನಿಯ ಅಧಿಕಾರಿಗಳ ಜತೆ ಮಾತನಾಡಿ ಬಾಕಿ ಇರುವ ವಿಮೆ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡುವಂತೆ ಒತ್ತಾಯಿಸಿದರು.
ಇದೀಗ ಮುಂಗಾರು ಮಳೆಗಾಲ ಶುರುವಾಗಿದ್ದು ರೈತರಿಗೆ ಸಕಾಲಕ್ಕೆ ರಸಗೊಬ್ಬರ ಬಿತ್ತನೆ ಬೀಜಗಳು ಸಿಗುವಂತೆ ಕ್ರಮ ವಹಿಸಬೇಕು, ಕೆಲವೊಂದು ರಸಗೊಬ್ಬರ ಅಂಗಡಿಗಳಲ್ಲಿ ರಸೀದಿ ಕೊಡುತ್ತಿಲ್ಲ. ಒಂದು ಮೂಟೆ ರಸಗೊಬ್ಬರ ಕೇಳಿದರೆ ಅದರ ಜತೆಗೆ ಮತ್ತೊಂದು ಬೇರೆ ರಸಗೊಬ್ಬರ ಖರೀದಿಸಿದರೆ ಮಾತ್ರ ಈ ರಸಗೊಬ್ಬರ ಕೊಡುವುದಾಗಿ ಒತ್ತಾಯ ಹಾಕುತ್ತಾರೆ. ಅದನ್ನು ತಪ್ಪಿಸಬೇಕೆಂದು ಕೋರಿದರು.
ರಸಗೊಬ್ಬರ ಅಂಗಡಿಗಳ ಬಳಿ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಉಪ ಕೃಷಿ ನಿರ್ದೇಶಕಿ ಮಂಜುಳ ಅವರು ಮನವಿ ಪತ್ರವನ್ನು ಸ್ವೀಕರಿಸಿ ಹಿರಿಯ ಅಧಿಕಾರಿಗಳ ಜತೆ ಈ ಮನವಿ ಪತ್ರದಲ್ಲಿನ ಅಂಶಗಳ ಬಗ್ಗೆ ಚರ್ಚಿಸಿ ಅಗತ್ಯಕ್ರಮವಹಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಪಿ.ಆರ್.ರವಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಕದಿರೇಗೌಡ, ಬಿ.ಆಂಜಿನಪ್ಪ, ಮುನಿಯಪ್ಪ, ನಾರಾಯಣಸ್ವಾಮಿ,, ಅರಿಕೆರೆ ಸಂತೋಷ್, ಜಿಲ್ಲಾ ಸಂಚಾಲಕ ಅಶ್ವತ್ಥಪ್ಪ ಹಾಜರಿದ್ದರು.