Sidlaghatta : ಶಿಡ್ಲಘಟ್ಟ ನಗರದಲ್ಲಿ ಶ್ರೀ ರೇಣುಕಾ ಎಲ್ಲಮ್ಮದೇವಿಯ ಹೂವಿನ ಕರಗ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಈ ವರ್ಷ ಮುನಿಕೃಷ್ಣಪ್ಪ ಅವರು ಕರಗ ಹೊತ್ತ ಗೌರವವನ್ನು ಪಡೆದರು.
ಮಂಗಳವಾರ ಮಧ್ಯಾಹ್ನ ದೇವರಿಗೆ ಕಲ್ಯಾಣೋತ್ಸವ ಮತ್ತು ಸಂಜೆ ದಾಸಯ್ಯನವರ ಮಣಿಸೇವೆ ನೆರವೇರಿತು. ಬಾವಿಯ ಬಳಿ ಕರಗ ಹೊರುವವರಿಂದ ಗಂಗೆ ಪೂಜೆ ನೆರವೇರಿದ ಬಳಿಕ, ಮಧ್ಯರಾತ್ರಿ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಲಾಯಿತು.
ಮುಂದೆ ಕತ್ತಿ ಹಿಡಿದ ವೀರಕುಮಾರರ ತಂಡದೊಂದಿಗೆ, ಹಿಂದೆ ಭಕ್ತರು ಕುಣಿಯುತ್ತಾ ಕರಗವು ರಾತ್ರಿಯಿಡೀ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ, ಆರತಿ ಬೆಳಗಿಸಿ, ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು.
ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬಸ್ ನಿಲ್ದಾಣ ಹಾಗೂ ಟಿ.ಬಿ. ರಸ್ತೆಯಲ್ಲಿ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು.
ಈ ಅದ್ಧೂರಿ ಕರಗ ಉತ್ಸವದಲ್ಲಿ ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಮಾಜಿ ಶಾಸಕ ಎಂ. ರಾಜಣ್ಣ, ಮೇಲೂರು ಸಚಿನ್, ಎಬಿಡಿ ಅಧ್ಯಕ್ಷ ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್ ಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ, ನಗರಸಭೆ ಸದಸ್ಯರಾದ ಮುನಿರಾಜು, ನಾರಾಯಣಸ್ವಾಮಿ, ಶ್ರೀರಾಮ ಯುವಕರ ಬಳಗದ ಪದಾಧಿಕಾರಿಗಳು, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮುರಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ನರೇಶ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡರು.