Sidlaghatta : ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಪವಿತ್ರ ಈದ್ ಉಲ್ ಫಿತರ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಗುರುವಾರ ಆಚರಿಸಿದರು .
ಸಂಪ್ರದಾಯದಂತೆ ಪವಿತ್ರ ರಂಜಾನ್ ತಿಂಗಳಿನಲ್ಲಿ 30 ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸಿ, ತರಾವೇ ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಿ, ಶಿಡ್ಲಘಟ್ಟ ನಗರದ ಮಿಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ನಂತರ ಹಿರಿಯರ ಸಮಾಧಿ ಬಳಿ ತೆರಳಿ ಗೌರವ ಸಲ್ಲಿಸಿದರು.
ನಗರದ ವಿವಿಧ ಮಸೀದಿಗಳಿಂದ ಬಂದ ಸಹಸ್ರಾರ ಮುಸ್ಲಿಂ ಬಾಂಧವರು ಸಂಘಟಿತರಾಗಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಶಾಸಕ ಮೇಲೂರು ರವಿಕುಮಾರ್, ಮಾಜಿ ಶಾಸಕ ವಿ. ಮುನಿಯಪ್ಪ, ರಾಜಣ್ಣ ಹಾಗೂ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಅವರು ಶುಭಕೋರಿದ ಸಂದೇಶವನ್ನು ಈ ಸಂದರ್ಭದಲ್ಲಿ ವಾಚಿಸಲಾಯಿತು.
ಧರ್ಮಗುರು ಮುಫ್ತಿ ಫಹೀಂ ಉದ್ದೀನ್ ಅವರು ಮಾತನಾಡಿ, ಇಸ್ಲಾಂ ಧರ್ಮವು ಶಾಂತಿಯ ಸಂದೇಶವನ್ನು ಸಾರುತ್ತದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಪವಿತ್ರ ಗ್ರಂಥ ಖುರಾನಿನ ಮೂಲಕ ಇಸ್ಲಾಂ ಧರ್ಮವನ್ನು ಬೆಳೆಸಿದರು. ಜಾತಿ, ಮತ ಧರ್ಮಗಳನ್ನು ಬಿಟ್ಟು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕೆಂದು ಕಲಿಸಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ದ್ವೇಷವನ್ನು ಅಳಿಸಿ, ಪ್ರೀತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು.
ಇದೇ ವೇಳೆಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ರೈತರು ಸಹಿತ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಹ ಆಗಲಿ ಎಂದು ಆಶಿಸಿದರು
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರಾತ್ರಿ ಇಡೀ ಪೋಲಿಸ್ ಇಲಾಖೆಯ ಅಧಿಕಾರಿಗಳು ಗಸ್ಥ್ ಮಾಡಿ, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಜೆಡಿಎಸ್ ಮುಖಂಡ ಸಚಿನ್ ಆಗಮಿಸಿ, ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭ ಕೋರಿದರು. ಜಾಮೀಯಾ ಮಸೀದಿ ಕಾರ್ಯದರ್ಶಿ ಬಿ ಸಯ್ಯದ್ ಸಲಾಂ ಸಾಬ್, ಮಸೀದಿ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ರಫೀಕ್ ಅಹ್ಮದ್, ಮಹ್ಮದೀಯಾ ಮಸೀದಿ ಕಾರ್ಯದರ್ಶಿ ಶರೀಫ್, ಮದೀನಾ ಮಸೀದಿಯ ನಿಸಾರ್ ಅಹ್ಮದ್, ಅಕ್ರಂ ಪಾಷಾ, ಅಸಾದ್, ಇಮ್ತಿಯಾಜ್, ಶಂಶೀರ್, ಖದೀರ್ ಪಾಷಾ ಹಾಜರಿದ್ದರು.