ಅತಿವೃಷ್ಟಿಯಿಂದಾಗಿರುವ ಬೆಳೆ ನಷ್ಟ, ವಸತಿ, ಕೆರೆ ಕಟ್ಟೆ ಕಾಲುವೆ, ರಸ್ತೆ, ಚರಂಡಿಗಳು ಹಾಳಾಗಿರುವುದನ್ನು ವೀಕ್ಷಿಸಲು ಕೇಂದ್ರದ ತಂಡ ಶನಿವಾರ ಶಿಡ್ಲಘಟ್ಟಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ DC ಆರ್.ಲತಾ ಅವರು ತಾಲ್ಲೂಕಿಗೆ ಶುಕ್ರವಾರ ಭೇಟಿ ನೀಡಿದ್ದರು.
ಶಿಡ್ಲಘಟ್ಟ ನಗರದಲ್ಲಿನ ಕುರುಬರಪೇಟೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳು, ಬೆಳ್ಳೂಟಿ ಕೆರೆಯಿಂದ ಭದ್ರನಕೆರೆಗೆ ನೀರು ಹರಿಯುವ ಕಾಲುವೆ ಒತ್ತುವರಿಯಿಂದ ನೀರು ನುಗ್ಗಿದ್ದ ಬೆಳೆಗಳ ಪ್ರದೇಶ ಹಾಗೂ ಆನೆಮಡಗು ಬಳಿಯ ಅಗ್ರಹಾರ ಕೆರೆ ಕಟ್ಟೆ ಒಡೆದಿರುವುದನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಶಿವಶಂಕರ್, ಉಪ ಕಾರ್ಯದರ್ಶಿ ಶಿವಕುಮಾರ್, ಶಿಡ್ಲಘಟ್ಟ ತಹಶೀಲ್ದಾರ್ ಬಿ.ಎಸ್.ರಾಜೀವ್, ಇಒ ಚಂದ್ರಕಾಂತ್, ಕೃಷಿ ಇಲಾಖೆಯ ಉಪ ನಿರ್ದೇಶಕಿ ರೂಪ ಮುಂತಾದ ಅಧಿಕಾರಿಗಳೊಂದಿಗೆ ಆಗಮಿಸಿದ್ದ ಡಿಸಿ ಅವರು ಕೇಂದ್ರದ ತಂಡವನ್ನು ಎಲ್ಲೆಲ್ಲಿಗೆ ಕರೆದುಕೊಂಡು ಹೋಗಬೇಕೆಂಬುದರ ಬಗ್ಗೆ ಚರ್ಚಿಸಿದರು.
ಕೇಂದ್ರದಿಂದ ಆಗಮಿಸುವ ತಂಡ ಕೇಳಿದ ಎಲ್ಲ ಮಾಹಿತಿಯನ್ನು ಒದಗಿಸಲು ಹಾಗೂ ಕೇಂದ್ರದ ತಂಡ ಅವರು ಬಯಸಿದ ಕಡೆ ವೀಕ್ಷಣೆಗೆ ಕರೆದೊಯ್ಯಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧರಾಗಬೇಕಿದೆ, ಸೂಕ್ತ ಮಾಹಿತಿ ಅಂಕಿ ಅಂಶಗಳನ್ನು ಒದಗಿಸಲು ಸೂಚಿಸಿದರು.