Sidlaghatta : ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ. ಅದಕ್ಕಾಗಿ ಜನರು ಕೆಲವು ಆಚರಣೆಗಳನ್ನು ಮಾಡುವುದುಂಟು. ಈ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು ವೈವಿಧ್ಯಮಯವಾಗಿರುತ್ತದೆ.
ನಗರದ ಹೊರವಲಯದ ಮಾರುತಿನಗರದ ನಿವಾಸಿಗಳು ಬುಧವಾರ ಮಳೆರಾಯನ ಪೂಜೆಯನ್ನು ಪ್ರಾರಂಭಿಸಿದರು. ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ಮಕ್ಕಳು ಮನೆಮನೆಗೂ ಹೋಗುತ್ತಾರೆ. ಪ್ರತಿ ಮನೆಯವರೂ ಹಸಿಟ್ಟನ್ನು ನೀಡುತ್ತಾರೆ. ದೇಗುಲದ ಬಳಿ ತಿಂಗಳ ಮಾಮ ಅಥವಾ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ, ಹೂಗಳಿಂದ ಅಲಂಕರಿಸಿ ರೊಟ್ಟಿ ಅನ್ನವನ್ನಿಟ್ಟು ಪೂಜಿಸುತ್ತಾರೆ. ಕೋಲಾಟ, ಹಾಡು ಮುಂತಾದವುಗಳು ನಡೆಯುತ್ತವೆ. ಪ್ರಸಾದ ವಿತರಣೆಯೂ ಮಾಡಲಾಗುತ್ತದೆ. ಈ ರೀತಿ ಎಂಟು ದಿನ ಜರುಗುತ್ತದೆ. ಒಂಬತ್ತನೇ ದಿನ ಇಬ್ಬರು ಗಂಡು ಮಕ್ಕಳಿಗೆ ಹಿರಿಯರಿಗೆ ಮಾಡುವ ರೀತಿಯಲ್ಲಿ ಶಾಸ್ತ್ರಬದ್ಧವಾಗಿ ಮದುವೆ ಮಾಡಲಾಗುತ್ತದೆ. ನಂತರ ಚಿತ್ತಾರದ ಚಂದ್ರನನ್ನು ವಿಸರ್ಜಿಸುತ್ತಾರೆ.
“ತೆಲುಗು ಪ್ರಭಾವವಿರುವ ಜಿಲ್ಲೆಯಲ್ಲಿ ಈ ಆಚರಣೆ ರೂಢಿಯಲ್ಲಿದೆ. ಮಳೆ ಬರದೆ ಬೆಳೆ ಒಣಗಿದಾಗ ನಮ್ಮ ಜನಪದರು ಭಕ್ತಿಯಿಂದ ಮಳೆರಾಯನನ್ನು ಆರಾಧಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಜನರದ್ದು” ಎಂದು ನಗರಸಭೆ ಸದಸ್ಯೆ ವಸಂತ ಬಾಲಕೃಷ್ಣ ತಿಳಿಸಿದರು. ಮಳೆಪೂಜೆಯಲ್ಲಿ ಬಾಲಕರಾದ ತೇಜಸ್, ಕುಶಾಲ್, ಅರ್ಜುನ್ ಪಾಲ್ಗೊಂಡಿದ್ದರು.