Sidlaghatta : ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶಿಡ್ಲಘಟ್ಟ ನಗರದ ರೇಷ್ಮೆಬಿತ್ತಿನೆ ಕೋಠಿ ಬಳಿಯ ಗಣೇಶ ಬಡಾವಣೆಯ ಶ್ರೀಅಕ್ಷರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ-587(ಶೇ 97.83) ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮಳಾಗಿದ್ದಾಳೆ.
ಹಾಗೆಯೆ ಇದೇ ಶಾಲೆಯ ವಿದ್ಯಾರ್ಥಿನಿ ಕೆ.ಮಾನಸ-586(ಶೇ 97.66) ಅಂಕಗಳನ್ನು ಗಳಿಸಿ ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮಳಾಗಿದ್ದಾಳೆ. ಜತೆಗೆ ಹನುಮಂತಪುರ ಗೇಟ್‌ನ ಬಿಜಿಎಸ್ ಪಿಯು ಕಾಲೇಜಿನ ಎನ್.ಸೊಹ್ರಾ-586(ಶೇ 97.66)ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾಳೆ.
ಅಕ್ಷರ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮಳಾದ ಪಲ್ಲವಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡ ಕೆ.ಮಾನಸಳನ್ನು ಅವರ ಹೆತ್ತವರೊಂದಿಗೆ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅಕ್ಷರ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ವಿ.ಪ್ರಕಾಶ್, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಅದು ತಾಲ್ಲೂಕು, ಜಿಲ್ಲೆ ಹಾಗೂ ಹೆತ್ತವರಿಗಷ್ಟೆ ಅಲ್ಲ ವಿದ್ಯಾಭ್ಯಾಸ ನೀಡಿದ ನಮಗೆ ಎಲ್ಲರಿಗಿಂತಲೂ ಹೆಚ್ಚು ಖುಷಿ ಆಗುತ್ತದೆ ಎಂದರು.
ನಮ್ಮ ಕಾಲೇಜಿಗೆ ಈ ವರ್ಷ ಶೇ 100 ರಷ್ಟು ಫಲಿತಾಂಶ ದೊರೆತಿದ್ದು ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಅತ್ತ್ಯುನ್ನತ ದರ್ಜೆ, ವಾಣಿಜ್ಯ ವಿಭಾಗದಲ್ಲಿ 23 ವಿದ್ಯಾರ್ಥಿಗಳು ಅತ್ತ್ಯತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ ಇಬ್ಬರು, ರಸಾಯನಶಾಶ್ತ್ರ ವಿಷಯದಲ್ಲಿ ಮೂವರು, ಗಣಿತ ವಿಷಯದಲ್ಲಿ ಒಬ್ಬರು ಮತ್ತು ಜೀವಶಾಸ್ತ್ರ ವಿಷಯದಲ್ಲಿ 4 ವಿದ್ಯಾರ್ಥಿಗಳು ಶೇ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಮೊದಲಿಗಳಾದ ಪಲ್ಲವಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡ ಮಾನಸ ಅವರನ್ನು ಅಭಿನಂದಿಸಲಾಯಿತು. ಉಪನ್ಯಾಸಕರಾದ ಕೆ.ಮಂಜುನಾಥ್, ಗಜೇಂದ್ರ, ಮಂಜುನಾಥರೆಡ್ಡಿ, ಸುನಿಲ್ ಕುಮಾರ್, ಎಸ್.ಭವ್ಯ, ರಾಜೇಶ್‌ಕುಮಾರ್, ಮುನಿರಾಜು ಹಾಜರಿದ್ದರು.