Sidlaghatta : ನಗರೋತ್ಥಾನ ಹಂತ-4 ಅಡಿಯಲ್ಲಿ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಂಗಳವಾರ ವೀಕ್ಷಿಸಿದರು.
ನಗರೋತ್ಥಾನ ಹಂತ-4 ಯೋಜನೆಯಡಿ ಶಿಡ್ಲಘಟ್ಟಕ್ಕೆ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತ ಸಿಮೆಂಟ್ ರಸ್ತೆ, ಡ್ರೈನೇಜ್ ಹಾಗೂ ಇತರ ಮೂಲ ಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿವೆ. ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಪರಿಶೀಲನೆ ವೇಳೆ ಎಂ.ಬಿ. ಪುಸ್ತಕದಲ್ಲಿರುವ ಅಳತೆಯ ಪ್ರಕಾರ ರಸ್ತೆ ಮತ್ತು ಡ್ರೈನೇಜ್‌ಗಳ ಉದ್ದ, ಅಗಲ, ಆಳ ಸೇರಿದಂತೆ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕಾಮಗಾರಿಗಳು ಗುಣಮಟ್ಟದೊಂದಿಗೆ ಪೂರ್ಣಗೊಂಡಿರುವುದು ಕಂಡು ಬಂದಿದೆ” ಎಂದರು.
ಮೂರನೇ ವ್ಯಕ್ತಿಗಳ ಮೂಲಕವೂ ಪರಿಶೀಲನೆ ನಡೆಸಲಾಗಿದ್ದು, ಈಗ ನಾವು ಮತ್ತು ಅಧಿಕಾರಿಗಳ ತಂಡ ಸಾರ್ವಜನಿಕರ ಸಮ್ಮುಖದಲ್ಲಿ ವೀಕ್ಷಣೆ ನಡೆಸಿದಾಗ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದರು. ಇನ್ನೂ ಬಾಕಿಯಿರುವ 9 ಕೋಟಿ ರೂ. ಅನುದಾನದಲ್ಲಿ ಕಾರ್ಯಗೊಳ್ಳಬೇಕಾದ ಹಲವಾರು ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರಿ ಯೋಜನಾ ನಿರ್ದೇಶಕಿ ಹಾಗೂ ಕಾರ್ಯಪಾಲಕ ಅಭಿಯಂತರರಾದ ಕೆ. ಮಾಧವಿ, ನಗರಸಭೆ ಪೌರಾಯುಕ್ತ ಮಂಜುನಾಥ್, ಎಇಇ ರಘುನಾಥ್, ಮೋಹನ್, ಸುಧಾಕರ್, ಕಿರಣ್ ಹಾಗೂ ಗುತ್ತಿಗೆದಾರರಾದ ಕೆ.ಬಿ. ಮಂಜುನಾಥ್, ಮುರಳಿ ಹಾಜರಿದ್ದರು.