Sidlaghatta : ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರನ್ನು ಜಗಜ್ಯೋತಿ ಬಸವಣ್ಣ ಎಂದು ಕರೆಯುತಿದ್ದರು, ಇದೀಗ Narendra Modi ಅವರನ್ನು ವಿಶ್ವ ಗುರು ಎಂದು ಕರೆಯಲಾಗುತ್ತಿದೆ. ಮೋದಿ ಅವರ ಪ್ರಭಾವ ಅಷ್ಟರ ಮಟ್ಟಿಗೆ ಇದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೂರನೇ ಭಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸುತ್ತಿರುವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು 140 ಕೋಟಿ ಜನಸಂಖ್ಯೆಯ ಅಖಂಡ ಭಾರತದ ಪ್ರಧಾನಿಯಾಗಿ 3ನೇ ಭಾರಿಗೆ ಅಧಿಕಾರವಹಿಸಿಕೊಳ್ಳುತ್ತಿರುವ ಈ ಕ್ಷಣ ಈ ಭೂಮಿ ಇರುವವರೆಗೂ ಶಾಶ್ವತವಾಗಿರುತ್ತದೆ. ಮರೆಯಲಾರದ ಕ್ಷಣವಾಗಿ ನಮ್ಮ ನಿಮ್ಮೆಲ್ಲರ ಮನದಲ್ಲಿ ನೆಲೆಸುತ್ತದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಈ ರಾಜ್ಯದ ಸಿ.ಎಂ ಸಿದ್ದರಾಮಯ್ಯ ಮತ್ತು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರೆ ಕಾರಣ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರು ಅಧಿಕಾರದ ಮದದಲ್ಲಿ ಜೆಡಿಎಸ್ ಎಲ್ಲಿದೆ ಜೆಡಿಎಸ್ ಸತ್ತಿದೆ ಎಂದು ಪಕ್ಷವನ್ನು ಹೀಯಾಳಿಸಿದರು.
ಸಿದ್ದರಾಮಯ್ಯ ಅವರ ಈ ಹೀಯಾಳಿಕೆಯ ಮಾತು ಪಕ್ಷದ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ನೀಡಿತು. ಕೆಚ್ಚೆದೆಯಿಂದ ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷ ಇನ್ನೂ ಈ ನೆಲದಲ್ಲಿ ಗಟ್ಟಿಯಾಗಿದೆ ಎಂದು ಸಾಭೀತುಪಡಿಸಿದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಅಧಿಕಾರದ ಅಹಂ ಬಿಟ್ಟು ಈ ನಾಡಿನ ಜನರ ಶ್ರೇಯಸ್ಸು ಅಭಿವೃದ್ದಿಗಾಗಿ ಕೆಲಸ ಮಾಡುವಂತಾಗಬೇಕು. ಅಂತಹ ಒಳ್ಳೆಯ ಬುದ್ದಿಯನ್ನು ಆ ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಈ ದೇಶದ ಅನೇಕ ಶಕ್ತಿಗಳು ಒಟ್ಟುಗೂಡಿ ಕುತಂತ್ರ ನಡೆಸಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ಪಟ್ಟರು. ಆದರೆ ಈ ದೇಶದ ಮತದಾರರು ಜಾತಿ ಧರ್ಮ ಭಾಷೆಯನ್ನು ಮೀರಿ ಗೆಲ್ಲಿಸಿದ್ದಾರೆ ಎಂದರು.
ಮೋದಿ ಅವರು ಮೂರನೇ ಭಾರಿಗೆ ಪ್ರಧಾನಿಯಾಗಿ ಅಧಿಕಾರವಹಿಸುತ್ತಿದ್ದು ಈ ದೇಶವನ್ನು ಜಗತ್ತಿನ ಅಭಿವೃದ್ದಿಯ ಮುಂಚೂಣಿ ದೇಶವನ್ನಾಗಿ ರೂಪಿಸುತ್ತಾರೆ ಎಂದು ಆಶಿಸಿದರು.
ಈ ನಾಡಿನ ಜನರು ಗ್ಯಾರಂಟಿಯಂತ ಮಕ್ಮಲ್ ಟೋಪಿ ಯೋಜನೆಗಳಿಗೆ ಮನ್ನಣೆ ಕೊಡುವುದಿಲ್ಲ. ಈ ದೇಶದ ಹಿತಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿರುವ ಈ ನಾಡಿನ ಎಲ್ಲರಿಗೂ ಧನ್ಯವಾದಗಳು ಎಂದರು.
ಎಲ್ಲರಿಗೂ ಸಿಹಿ ಹಂಚಲಾಯಿತು. ಕೇಸರಿ ಶಲ್ಯಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್ ಆನಂದಗೌಡ, ಬಂಕ್ ಮುನಿಯಪ್ಪ, ತಾದೂರು ರಘು, ಸುರೇಂದ್ರಗೌಡ, ಆಂಜನೇಯಗೌಡ, ಹುಜಗೂರು ರಾಮಣ್ಣ, ನಾರಾಯಣಸ್ವಾಮಿ, ರಾಘವೇಂದ್ರ, ನರೇಶ್, ರಜನೀಕಾಂತ್ ಇನ್ನಿತರೆ ಜೆಡಿಎಸ್, ಬಿಜೆಪಿ ಮೈತ್ರಿ ಮುಖಂಡರು ಹಾಜರಿದ್ದರು.