Sidlaghatta : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ವಾಹನ ಸವಾರರ ಜೀವ ಭದ್ರತೆಯ ಹಿತದೃಷ್ಟಿಯಿಂದ ದಾಖಲೆಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಲು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಹೇಳಿದರು.
ನಗರದ ಪೊಲೀಸ್ ಠಾಣೆಯ ಮುಂದೆ ಗುರುವಾರ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದ ನಂತರ ಅವರು ಮಾತನಾಡಿದರು.
ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ಬಹುತೇಕ ಆಟೋಗಳಿಗೆ ವಿಮೆ ಇರುವುದಿಲ್ಲ ಹಾಗೂ ಕೆಲವೊಂದಕ್ಕೆ ದಾಖಲೆಗಳು ಇಲ್ಲ ಎಂಬ ದೂರುಗಳು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಮುಂದಿನ ಹದಿನೈದು ದಿನಗಳೊಳಗೆ ಎಲ್ಲಾ ಆಟೋ ಚಾಲಕರು ತಮ್ಮ ಆಟೋಗಳಿಗೆ ಸಂಬಂಧಿಸಿದಂತೆ ವಿಮೆ ಸೌಲಭ್ಯಗಳನ್ನು ಮಾಡಿಕೊಂಡು ದಾಖಲೆಗಳನ್ನು ಕ್ರಮಬದ್ಧವಾಗಿ ಇಟ್ಟುಕೊಂಡು ಸಂಚರಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಆಟೋಗಳನ್ನು ನಿರ್ದಾಕ್ಷಿಣ್ಯ ವಾಗಿ ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಂಚಾರ ನಿಯಮಗಳ ಪಾಲನೆ ಎಲ್ಲರ ಕರ್ತವ್ಯವಾಗಬೇಕು. ಇದು ಜನರ ಹಿತಕ್ಕಾಗಿ ಮಾಡುತ್ತಿರುವ ಕಾರ್ಯ. ಜನರೇ ಎಚ್ಚೆತ್ತುಕೊಂಡು ತಮ್ಮ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು. ವಾಹನಗಳ ದಾಖಲೆಗಳನ್ನು ಕ್ರಮಬದ್ಧವಾಗಿ ಇಟ್ಟುಕೊಂಡು ಸಂಚಾರ ಮಾಡಿದರೆ ಎಲ್ಲರಿಗೂ ಕ್ಷೇಮ ಎಂದು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಮುಂದೆ ನಿಂತು ಈ ಮಾರ್ಗದಲ್ಲಿ ಸಂಚರಿಸಿದ ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ವಾಹನ ಸವಾರರಿಗೆ ತಿಳಿವಳಿಕೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ಮತ್ತು ಸಿಬ್ಬಂದಿ ಹಾಜರಿದ್ದರು.