Sidlaghatta : ಪರಸ್ಪರ ಆರು ವರ್ಷಗಳ ಕಾಲ ಪ್ರೀತಿಸಿದ್ದ ಪ್ರೇಮಿಗಳ ಮದುವೆಗೆ ಪೋಷಕರ ವಿರೋಧ ಎದುರಾದ ಹಿನ್ನಲೆಯಲ್ಲಿ, ಹುಡುಗಿ ಪೊಲೀಸರ ಮೊರೆಹೋದ ಬಳಿಕ, ಪೊಲೀಸರು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಠಾಣೆಯಲ್ಲೇ ಮದುವೆ ನೆರವೇರಿಸಲಾಯಿತು.
ನಗರದ ಉಲ್ಲೂರು ಪೇಟೆಯ ಅಂಕಿತಾ ಹಾಗೂ ದೊಡ್ಡದಾಸೇನಹಳ್ಳಿ ಗ್ರಾಮದ ಕಾರ್ತಿಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಂತರ್ಜಾತಿ ಮದುವೆ ಎಂಬ ಕಾರಣವನ್ನು ಮುನಿಸಿಕೊಂಡು ಕಾರ್ತಿಕ್ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದರು.
ಮದುವೆಗೆ ನಿರಾಕರಿಸಿದ್ದರಿಂದ ಅಂಕಿತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಜಿಲ್ಲಾ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ಆದೇಶದಂತೆ ಶಿಡ್ಲಘಟ್ಟ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಸೈ ವೇಣುಗೋಪಾಲ್, ಕಾರ್ತಿಕ್ ಅವರನ್ನು ಠಾಣೆಗೆ ಕರೆಸಿ, ಇಬ್ಬರಿಗೂ ಮಾತುಕತೆ ನಡೆಸಿ ಪರಸ್ಪರ ಒಪ್ಪಿಗೆಯಂತೆ ಮದುವೆ ನೆರವೇರಿಸಿದರು.
ಈ ಪ್ರೇಮಿಗಳ ಮದುವೆ ನಡೆಸುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಪಿಎಸ್ಸೈ ಪದ್ಮಾವತಿ, ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ರಾಮಾಂಜಿ, ದಲಿತ ಸಂಘರ್ಷ ಸಮಿತಿಯ ಎನ್.ಎ. ವೆಂಕಟೇಶ್, ಚಲಪತಿ, ಪ್ರತೀಶ್, ರವಿಶಂಕರ್, ದಾಸಣ್ಣ, ನರೇಂದ್ರ ಸೇರಿದಂತೆ ಅನೇಕ ಮುಖಂಡರು ಸಾಕ್ಷಿಯಾಗಿದ್ದರು.
ಆರು ವರ್ಷಗಳ ಪ್ರೇಮದ ನಂತರ ಪೋಷಕರ ವಿರೋಧದಿಂದಾಗಿ ದೂರಾಗಿದ್ದ ಅಂಕಿತಾ ನೀಡಿದ ದೂರಿನ ಅನ್ವಯ, ಇಬ್ಬರಿಗೂ ವಿವಾಹವಾಗಲು ಒಪ್ಪಿಗೆಯಿದ್ದರಿಂದ ಅವರ ಭವಿಷ್ಯ ಸುಖಕರವಾಗಲಿ ಎಂಬ ಆಶಯದಿಂದ ಠಾಣೆಯಲ್ಲೇ ಮದುವೆ ನೆರವೇರಿಸಲಾಗಿದೆ ಎಂದು ಪಿಎಸ್ಸೈ ವೇಣುಗೋಪಾಲ್ ತಿಳಿಸಿದ್ದಾರೆ.