Sidlaghatta : ಪ್ರತಿಯೊಬ್ಬರೂ ಸಹ ತಮ್ಮ ಬದುಕಿನ ಉದ್ದಕ್ಕೂ ಸಂವಿಧಾನದ ಕಾನೂನನ್ನು ಗೌರವಿಸಿದಾಗ ಕಾನೂನು ಸಹ ನಿಮ್ಮ ರಕ್ಷಣೆಗೆ ನಿಲ್ಲಲಿದೆ. ಹಾಗಾಗಿ ಎಲ್ಲರೂ ಸಹ ಕಾನೂನು ಗೌರವಿಸಿ ಕಾನೂನನ್ನು ಪಾಲಿಸಿ ಎಂದು ಶಿಡ್ಲಘಟ್ಟ ನಗರಠಾಣೆಯ ಎಸ್.ಐ ವೇಣುಗೋಪಾಲ್ ತಿಳಿಸಿದರು.
ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಹಿನ್ನಲೆಯಲ್ಲಿ ಕರೆದಿದ್ದ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟದಲ್ಲಿ ರೇಷ್ಮೆ ಕೃಷಿ, ಹೈನುಗಾರಿಕೆಯಲ್ಲಿ ಸಾವಿರಾರು ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಅದರಲ್ಲೂ ರೇಷ್ಮೆ ಕೃಷಿಯಲ್ಲಿ ಎಲ್ಲ ಧರ್ಮದವರೂ ತೊಡಗಿಸಿಕೊಂಡಿದ್ದು ಪರಸ್ಪರ ಸೌಹಾರ್ಧತೆಯಿಂದ ಬಾಳಿ ಬದುಕುತ್ತಿರುವುದು ಮಾದರಿ ಆಗಿದೆ.
ಎಲ್ಲರೂ ಸಹ ಪರಸ್ಪರರ ಭಾವನೆಗಳನ್ನು ಗೌರವಿಸಿಕೊಂಡು ತಮ್ಮ ತಮ್ಮ ಆಚರಣೆ ಪದ್ದತಿಗಳನ್ನು ಆಚರಿಸಿಕೊಳ್ಳಬೇಕಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆಯೊಂದಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದರು.
ಹಿಂದು ಮತ್ತು ಮುಸ್ಲೀಮರು ಅವರವರ ಹಬ್ಬ ಹರಿದಿನಗಳನ್ನು, ಪ್ರಾರ್ಥನೆಗಳನ್ನು ಮಾಡಿಕೊಳ್ಳಲು ಅಡ್ಡಿಯಿಲ್ಲ. ಪೊಲೀಸ್ ಸಿಬ್ಬಂದಿಯೂ ಸಹ ನಿಮ್ಮೊಂದಿಗೆ ಸೌಜನ್ಯವಾಗಿ ವರ್ತಿಸುವ, ಸಾರ್ವಜನಿಕ ಸ್ನೇಹಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ನುಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ಮುಖಂಡರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಭೆಯಲ್ಲಿಟ್ಟರು.
ಸಿಪಿಐ ನಂದಕುಮಾರ್, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಕನಕಪ್ರಸಾದ್, ಸಾಕ್, ಮಕ್ಸೂದ್, ಗಫೂರ್ ಹಾಜರಿದ್ದರು.