Sidlaghatta : ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು. ಅದರಲ್ಲೂ ಹಿರಿಯರು, ಮಹಿಳೆಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಜತೆಗೆ ಸಂಯಮದಿಂದ ವರ್ತಿಸಬೇಕು ಎಂದು ಶಿಡ್ಲಘಟ್ಟ ನಗರಠಾಣೆಯ ಎಸ್.ಐ ಕೆ.ವೇಣುಗೋಪಾಲ್ ಅವರು ಚಾಲಕರು ಮತ್ತು ನಿರ್ವಾಹಕರಿಗೆ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಇರುವ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳ ಚಾಲಕರು ಮತ್ತು ನಿರ್ವಾಹಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಚಾಲಕ ವೃತ್ತಿಯ ಬಗ್ಗೆ ನಿರ್ಲಕ್ಷ್ಯ ಬೇಡ. ಚಾಲಕ ವೃತ್ತಿಯು ಬಹಳ ಮುಖ್ಯ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಅವರ ಕುಟುಂಬದವರ ರಕ್ಷಣೆ ನಿಮ್ಮ ಕೈಯ್ಯಲ್ಲಿರುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಪ್ರಯಾಣಿಕರು, ಸಾರ್ವಜನಿಕರಲ್ಲಿ ಆತಂಕ ಮೂಡಲು ಕಾರಣವಾಗುತ್ತದೆಯಲ್ಲದೆ ಸಾರಿಗೆ ಸಂಸ್ಥೆಯ ಬಸ್, ಬಸ್ ಚಾಲಕರು ಹಾಗೂ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಕಡಿಮೆ ಆಗಲು ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಲನೆ ಮಾಡುವಾಗ ವೈಯಕ್ತಿಕ ಕೆಲಸ ಕಾರ್ಯ, ಮೊಬೈಲ್‌ನಲ್ಲಿ ಮಾತುಕತೆ ನಡೆಸುವುದು, ಪರಿಚಯ ಇರುವ ಪ್ರಯಾಣಿಕರೊಂದಿಗೆ ಅನಗತ್ಯ ಮಾತುಕತೆ ನಡೆಸುವಂತ ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಬಾರದು ಎಂದು ತಾಕೀತು ಮಾಡಿದರು.
ಬಸ್ ನಲ್ಲಿ ಯಾರಾದರೂ ಪ್ರಯಾಣಿಕರು ತಮ್ಮ ಬೆಲೆ ಬಾಳುವ ವಸ್ತುಗಳು, ಚಿನ್ನಾಭರಣ, ಹಣವನ್ನು ಬಿಟ್ಟು ಹೋದಲ್ಲಿ ಅವುಗಳನ್ನು ಇಲಾಖೆ ಮೇಲಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಒಪ್ಪಿಸುವಂತ ಕೆಲಸಗಳನ್ನು ಎಲ್ಲರೂ ಸಹ ಅಚ್ಚುಕಟ್ಟಾಗಿ ಮಾಡಬೇಕೆಂದು ಮನವಿ ಮಾಡಿದರು.
ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಯಾಣಿಕರಲ್ಲಿ ನಿಮ್ಮ ಮೇಲೆ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಆ ನಂತರ ಮೇಲಧಿಕಾರಿಗಳಲ್ಲಿ ನಿಮ್ಮ ಬಗ್ಗೆ ವಿಶೇಷ ಗೌರವ ಮೂಡುವಂತಾಗುತ್ತದೆ ಎಂದು ಹೇಳಿದರು.
ಸಾರಿಗೆ ಸಂಸ್ಥೆಯ ಡಿಪೋದ ವ್ಯವಸ್ಥಾಪಕ ಜೆ.ಗಂಗಾಧರ್ ಮಾತನಾಡಿ, ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಚಾಲಕರು ಮತ್ತು ನಿರ್ವಾಹಕರು, ನಗರಠಾಣೆಯ ಸಿಬ್ಬಂದಿ ಹಾಜರಿದ್ದರು.