Sidlaghatta : ಹಿಂದಿನಿಂದಲೂ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿರುವರು. ಅದೇ ರೀತಿ ರಂಜಾನ್ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿ ಕರಗ ಮಹೋತ್ಸವವನ್ನು ಸೌಹಾರ್ಧವಾಗಿ ನಡೆಸಿಕೊಂಡು ಹೋಗಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ತಿಳಿಸಿದರು.
ನಗರದ ಪೋಲೀಸ್ ಠಾಣೆಯಲ್ಲಿ ಶುಕ್ರವಾರ ರಂಜಾನ್ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿ ಕರಗದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆಯ ನೀತಿ ಸಹಿತ ಹಿನ್ನಲೆಯಲ್ಲಿ ತಮಗೆ ಬೇಕಾಗಿರುವ ಸವಲತ್ತುಗಳನ್ನು ನೀಡಲು ಹಾಗೂ 24 ಗಂಟೆ ಕೆಲಸ ಮಾಡಲು ಇಲಾಖೆಯ ಸಿಬ್ಬಂದಿ ಸಿದ್ದರಿದ್ದೇವೆ. ಎಲ್ಲವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡೋಣ. ಶ್ರೀ ಯಲ್ಲಮ್ಮ ದೇವಿಯ ಕರಗ ಮಹೋತ್ಸವವನ್ನು ಎಂದಿನಂತೆ ಸಂಪ್ರದಾಯ ಬದ್ಧವಾಗಿ ಆಚರಿಸಿ. ಆದರೆ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡದಂತೆ ಕರಗ ಮಹೋತ್ಸವದ ಮುಖ್ಯಸ್ಥರು ಎಚ್ಚರಿಕೆ ವಹಿಸಿ ಎಂದರು.
ನಗರದಲ್ಲಿನ ಟಿಬಿ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಿಯ ಕರಗ ಮಹೋತ್ಸವವು ಹಿನ್ನಲೆಯಲ್ಲಿ ಕರಗ ಮಹೋತ್ಸವದ ಮುಖ್ಯಸ್ಥರು, ದೇವಾಲಯದ ಭಕ್ತರು ಸೇರಿದಂತೆ ನಗರದ ಹಿರಿಯರು ಸಮಸ್ಯೆಗಳು ಬರದ ರೀತಿ ನೋಡಿಕೊಳ್ಳಿ. ಯುವಕರು ಅವಸರದಲ್ಲಿ ಏನಾದರೂ ತಪ್ಪುಗಳನ್ನು ಮಾಡಿದರೆ ಅದು ಅವರ ಜೀವನವನ್ನೇ ಹಾಳುಮಾಡಿಕೊಂಡಂತೆ. ಅಂತಹ ದುಸ್ಸಾಹಸಕ್ಕೆ ಕೈ ಹಾಕದೆ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಸ್ನೇಹ ಬಾಂಧವ್ಯದಿಂದ ಆಚರಿಸಿ ಎಂದರು.
ಈ ಬಾರಿ ರಂಜಾನ್ ಮತ್ತು ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗ ಒಂದೇ ಸಾರಿ ಬಂದಿರುವುದರಿಂದ ಎಲ್ಲಾ ನಾಗರಿಕರು ಸ್ನೇಹ ಸೌಹಾರ್ದತೆಯಿಂದ ಹಬ್ಬಗಳನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ವರವಹಿಸಿ ತುಂಬಾ ಸಂತೋಷವಾಗಿ ಆಚರಿಸಿ ಎಂದರು.
ನಗರಸಭೆ ಸದಸ್ಯ ರಾಘವೇಂದ್ರ, ನಂದ ಕಿಶನ್, ಎಸ್. ಎಂ. ರಮೇಶ್, ರವಿಕುಮಾರ್, ಕೆ.ನಾರಾಯಣಸ್ವಾಮಿ, ಸಾಧಿಕ್, ಸಲಾಂ, ಇಮ್ತಿಯಾಜ್ ಪಾಷಾ, ಹತಿಕ್ ಹಾಜರಿದ್ದರು.