Sidlaghatta : ಅಪರಿಚಿತರಿಂದ ಚಿನ್ನಾಭರಣಗಳನ್ನು ಖರೀದಿಸುವುದಾಗಲಿ, ಅಡವಿಟ್ಟುಕೊಳ್ಳುವುದಾಗಲಿ ಮಾಡಬೇಡಿ. ಹೆಚ್ಚಿನ ಹಣದಾಸೆಗೆ ಬಿದ್ದು ಕಾನೂನಿನ ಅಡಕತ್ತರಿಗೆ ಸಿಲುಕಬೇಡಿ ಎಂದು ಶಿಡ್ಲಘಟ್ಟ ನಗರಠಾಣೆಯ ಎಸ್‌ಐ ವೇಣುಗೋಪಾಲ್ ಅವರು ಚಿನ್ನಾಭರಣ ಅಂಗಡಿ, ಗಿರವಿ ಅಂಗಡಿಗಳ ಮಾಲೀಕರಿಗೆ ತಿಳಿ ಹೇಳಿದರು.
ನಗರಠಾಣೆಯಲ್ಲಿ ಚಿನ್ನಾಭರಣ ಅಂಗಡಿಗಳ ಮಾಲೀಕರಿಗೆ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಚಿತರಾಗಲಿ ಅಪರಿಚಿತರಾಗಲಿ ಅವರ ವಿಳಾಸವನ್ನು ದೃಡೀಕರಿಸುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಪಡೆದು ಅವರಿಂದ ಚಿನ್ನಾಭರಣವನ್ನು ಖರೀದಿಸುವುದು, ಅಡವಿಟ್ಟುಕೊಳ್ಳುವುದು ಮಾಡಿ, ಬಿಲ್ಲನ್ನು ತಪ್ಪದೆ ಕೊಡಿ ಎಂದು ಹೇಳಿದರು.
ಒಂದು ವೇಳೆ ಹೆಚ್ಚಿನ ಹಣದಾಸೆಗೆ ಬಿದ್ದು ಅಪರಿಚಿತರಿಂದ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಖರೀದಿಸುವುದು, ಅಡವಿಟ್ಟುಕೊಳ್ಳುವುದು, ಬಿಲ್ಲು ಕೊಡದೆ ಚಿನ್ನಾಭರಣವನ್ನು ಕೊಡುವುದು ಮಾಡಿದಲ್ಲಿ ಅದಕ್ಕೆ ನೀವು ದೊಡ್ಡ ಬೆಲೆ ತೆರಬೇಕಾಗುತ್ತದೆ. ಕಾನೂನಿನ ಸಂಕಷ್ಟಕ್ಕೂ ಸಿಲುಕಿತ್ತೀರಿ ಎಂದು ಎಚ್ಚರಿಸಿದರು.
ನಗರದಲ್ಲಿನ ಕೋಟೆ ವೃತ್ತ ಮತ್ತು ಸಾರಿಗೆ ಬಸ್ ನಿಲ್ದಾಣ ಬಳಿ ಸಿಸಿ ಕ್ಯಾಮರಾಗಳನ್ನು ನಿಮ್ಮ ಚಿನ್ನಾಭರಣ ಅಂಗಡಿಗಳ ಮಾಲೀಕರಿಂದ ಕೊಡುಗೆಯಾಗಿ ನೀಡಿ ಎಂದು ಎಸ್.ಐ ವೇಣುಗೋಪಾಲ್ ಅವರು ಚಿನ್ನಾಭರಣಗಳ ಅಂಗಡಿ ಮಾಲೀಕರ ಸಂಘದ ಮುಖ್ಯಸ್ಥರಿಗೆ ಮನವಿ ಮಾಡಿದರು.
ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು ಸಿಸಿ ಕ್ಯಾಮರಾಗಳನ್ನು ಕೊಡುಗೆಯಾಗಿ ನೀಡುವುದಾಗಿ ಭರವಸೆ ನೀಡಿದರು. ಚಿನ್ನಾಭರಣ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು, ಚಿನ್ನಾಭರಣ ಅಂಗಡಿ ಮಾಲೀಕರು ಭಾಗವಹಿಸಿದ್ದರು.