ಸಾಮಾನ್ಯವಾಗಿ ಪೊಲೀಸರಿಗೆ ಅಭಿಮಾನಿಗಳು ಇರುವುದು ವಿರಳ. ಅದರಲ್ಲೂ ಪೊಲೀಸ್ ಪೇದೆಗಳಿಗೆ ಇರುವುದೇ ಇಲ್ಲ. ಆದರೆ ಶಿಡ್ಲಘಟ್ಟದ ನಗರ ಠಾಣೆಯ ಪೊಲೀಸ್ ಪೇದೆ ಎನ್.ಧನಂಜಯ್ ಎಂದರೆ ಯುವಕರಿಗೆ ಅಚ್ಚುಮೆಚ್ಚು. ನಗರದ ಹಲವು ಮಂದಿ ಯುವಕರು ಸೇರಿ “ಧನು ಅಭಿಮಾನಿಗಳ ಸಂಘ”ವನ್ನೇ ಸ್ಥಾಪಿಸಿಕೊಂಡಿದ್ದಾರೆ.
ಎನ್.ಧನಂಜಯ್ ಅವರು ಎಸ್ಸೆಸ್ಸೆಲ್ಸಿ ವರೆಗೂ ಬಾಗೇಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದಿ, ಪದವಿಯನ್ನು ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದರು. ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಎಂ.ಎಸ್.ಡಬ್ಲು ಮಾಡಿ 2015 ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಖಾನಾಪುರದಲ್ಲಿ ತರಬೇತಿ ಪಡೆದು 2016 ರಲ್ಲಿ ಶಿಡ್ಲಘಟ್ಟದ ನಗರ ಠಾಣೆಗೆ ಕರ್ತವ್ಯಕ್ಕೆ ಹಾಜರಾದರು. ನಾಲ್ಕು ವರ್ಷ ಸೇವೆ ಸಲ್ಲಿಸಿ ಇದೀಗ ಬಾಗೇಪಲ್ಲಿಯ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ರೂಪಿಸಿದ್ದ ಪೊಲೀಸ್ ತಂಡದಲ್ಲಿದ್ದು, ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು ಅಂತರ್ ಇಲಾಖೆಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ನಗರದ 12 ನೇ ವಾರ್ಡ್ (ಗಾಂಧಿ ನಗರ) ಬೀಟ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಲ್ಲದೆ, ವಾರ್ಡಿನ ನಾಗರಿಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳಿಗೆ ಅದರಲ್ಲೂ ಸರ್ಕಾರಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಪುಸ್ತಕಗಳನ್ನು ಕೊಡಿಸಿ, ತಾವೇ ಪಾಠ ಹೇಳಿಕೊಟ್ಟು ಪ್ರೋತ್ಸಾಹಿಸಿದ್ದಾರೆ. ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಎರಡೂ ಸಮುದಾಯದವರನ್ನು ಒಟ್ಟಿಗೆ ಸೇರಿಸಿ ಸಾಮರಸ್ಯ ಬೆಳೆಯಲು ನೆರವಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಅನೇಕರಿಗೆ ನೆರವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕೆಲವಾರು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮಾಡಿ ವ್ಯಸನ ಮುಕ್ತರನ್ನಾಗುವಂತೆ ಮಾಡಿರುವರು.
“ನಾವು ಬಡ ಕುಟುಂಬಗಳ ಹಿನ್ನೆಲೆಯ ಹುಡುಗರು. ಚಿಕ್ಕ ವಯಸ್ಸಿಗೇ ದುಡಿಯಬೇಕಾದ ಅನಿವಾರ್ಯತೆ ನಮ್ಮದು. ನಮಗೆಲ್ಲಾ ಧನು ಅಣ್ಣ ಮಾರ್ಗದರ್ಶನ ಮಾಡಿದ್ದಾರೆ. ಪರೀಕ್ಷೆ ಬರೆಯಲು ನೆರವಾಗಿದ್ದಾರೆ. ಕೆಟ್ಟ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಜೀವನದಲ್ಲಿ ಹೇಗೆ ಸಾಧನೆ ಮಾಡಬೇಕು ಎಂದು ಸದಾ ಬುದ್ಧಿಹೇಳುತ್ತಿರುತ್ತಾರೆ” ಎನ್ನುತ್ತಾನೆ ಲೋಕೇಶ್.
ಬಾಗೇಪಲ್ಲಿಗೆ ವರ್ಗಾವಣೆಯಾದ ಧನಂಜಯ್ ಅವರನ್ನು ಅವರ ಅಭಿಮಾನಿಗಳು, ರೀಲರ್ಸ್ ಸಂಘದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.
ರೀಲರ್ಸ್ ಸಂಘದ ಶ್ರೀನಿವಾಸ್, ಧನು ಅಭಿಮಾನಿಗಳ ಸಂಘದ ಶ್ರೀನಾಥ್, ಲೋಕೇಶ್, ಅನಿಲ್, ದಯಾನಂದ್, ವೇಣುಗೋಪಾಲ್ ಹಾಜರಿದ್ದರು.