Sidlaghatta : ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ನಡು ರಸ್ತೆಯಲ್ಲಿನ ಗುಂಡಿ ಸಿಮೆಂಟ್ ಜಲ್ಲಿ ಕಲ್ಲು ಹಾಕಿ ಮುಚ್ಚುವ ಕಾರ್ಯಕ್ಕೆ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಮುಂದಾಗಿದ್ದು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ನಡೆದಿದೆ.
ನಗರದ ಸಾರಿಗೆ ಬಸ್ ನಿಲ್ದಾಣ ಬಳಿಯ ಸಲ್ಲಾಪುರಮ್ಮ ದೇವಿ ವೃತ್ತದ ಬಳಿ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಕಳೆದ ಹಲವು ದಿನಗಳಿಂದಲೂ ಈ ಗುಂಡಿ ಬಾಯಿ ತೆರೆದುಕೊಂಡಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ನಡು ರಸ್ತೆಯಲ್ಲಿದ್ದ ಈ ಗುಂಡಿ, ಸಣ್ಣ ಪುಟ್ಟ ಅಪಘಾತಗಳಿಗೆ ಕಾರಣವಾಗಿತ್ತು.
ನಗರಸಭೆಯವರಿಗೆ ಹತ್ತು ಹಲವು ಬಾರಿ ಹೇಳಿದ್ದರೂ ಉಪಯೋಗವಾಗದ್ದರಿಂದ ಎಸ್.ಐ ವೇಣುಗೋಪಾಲ್ ಹಾಗೂ ಸಿಬ್ಬಂದಿಯೆ ಈ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪೊಲೀಸ್ ಸಿಬ್ಬಂದಿಯೆ ಜಲ್ಲಿ ಕಲ್ಲು ಸಿಮೆಂಟನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಈ ಗುಂಡಿಯನ್ನು ಮುಚ್ಚಿದ್ದಾರೆ.
ಪ್ರವಾಸಿ ಮಂದಿರ ರಸ್ತೆ(ಟಿಬಿ ರಸ್ತೆ), ಎಸ್.ಬಿ.ಐ ಬ್ಯಾಂಕ್ ರಸ್ತೆ, ಸಂತೆ ಬೀದಿ ಹಾಗೂ ಚಿಂತಾಮಣಿ-ಚಿಕ್ಕಬಳ್ಳಾಪುರ ಮಾರ್ಗಕ್ಕೆ ತೆರಳುವ ರಸ್ತೆಗಳು ಕೂಡುವ ಈ ವೃತ್ತದಲ್ಲಿ ಬಿದ್ದಿದ್ದ ಈ ಗುಂಡಿಗೆ ಕೊನೆಗೂ ಹಲವು ವರ್ಷಗಳ ನಂತರ ಶಿಡ್ಲಘಟ್ಟ ನಗರಠಾಣೆಯ ಪೊಲೀಸರಿಂದ ಮೋಕ್ಷ ಸಿಕ್ಕಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಸಿಬ್ಬಂದಿ ರಮೇಶ್, ಅಶ್ವತ್ ರೆಡ್ಡಿ, ರಾಜೇಶ್ , ಸಲೀಂ ಹಾಜರಿದ್ದರು.