Sidlaghatta : ವಾಹನ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ನಗರಠಾಣೆ ಪಿಎಸ್ಸೈ ವೆಣುಗೋಪಾಲ್ ಹೇಳಿದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟ್ರಕ್, ಕಾರು ಮತ್ತಿತರ ವಾಹನ ಚಾಲಕರ ಸಭೆಯಲ್ಲಿ ಚಾಲರನ್ನುದ್ದೇಶಿಸಿ ಅವರು ಮಾತನಾಡಿದರು.
ವಾಹನ ಚಾಲಕರು ವಾಹನ ಚಲಾಯಿಸುವಾಗ ವಾಹನದಲ್ಲಿರುವ ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಿಮ್ಮನ್ನೇ ನಂಬಿ ಬಂದಿರುವ ಪ್ರಯಾಣಿಕರನ್ನು ನಿಮ್ಮ ನಿರ್ಲಕ್ಷತೆಯಿಂದ ಬಲಿ ಕೊಡುವುದು ಸರಿಯಲ್ಲ. ಬಹುತೇಕ ಅಪಘಾತಗಳು ಚಾಲಕನ ಅಜಾಗರೂಕತೆಯಿಂದ ಹಾಗು ಅತಿಯಾದ ವೇಗದಿಂದ ಸಂಭವಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಿ ನಿಮ್ಮನ್ನು ಆಧರಿಸಿರುವ ನಿಮ್ಮ ಕುಟುಂಬದವರನ್ನು ಕಾಪಾಡಬೇಕು ಎಂದರು.
ಪ್ರತಿಯೊಬ್ಬರೂ ವಾಹನದ ಎಲ್ಲಾ ಅಗತ್ಯ ದಾಖಲೆ ಸೇರಿದಂತೆ ಚಾಲನಾ ಪರವಾನಿಗೆ ತಮ್ಮ ಬಳಿ ಇಟ್ಟುಕೊಂಡಿರಬೇಕು. ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ವಾಹನಗಳನ್ನು ರಸ್ತೆಗಳಲ್ಲಿ ಎಲ್ಲಂದಿರಲ್ಲಿ ನಿಲ್ಲಿಸಬಾರದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಸೈ ವೆಂಕಟರಮಣಪ್ಪ, ಪೊಲೀಸ್ ಸಿಬ್ಬಂದಿ ಹಾಗು ಚಾಲಕರು ಹಾಜರಿದ್ದರು.