Jangamakote, Sidlaghatta : ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ, ಎಸ್.ಸಿ.ಐ ನವಜೀವನ ಸೇವಾ ಸಂಘ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ, ಸ್ವಚ್ಛತಾ ಕಾರ್ಯಕ್ರಮ, ಡೆಂಗಿ ಜ್ವರ ನಿಯಂತ್ರಣ ಹಾಗೂ ಜಾಗೃತಿ ಜಾಥಾ ಮತ್ತು ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸ್ಟೇಟ್ ಟ್ರೀಟ್ ಎಂಬ ಸ್ವಯಂಸೇವಾ ಸಂಸ್ಥೆಯ 60 ಜನ ಸ್ವಯಂಸೇವಕರು ಭಾಗವಹಿಸಿದ್ದರು. ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಜಂಗಮಕೋಟೆ ಹೋಬಳಿಯ ಎಲ್ಲಾ ಶಾಲೆಗಳ ವಿಕಲಚೇತನ ವಿದ್ಯಾರ್ಥಿಗಳಿಗೆ ಬ್ಯಾಗುಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಮಾರ್ಗದರ್ಶಿ ಸಂಸ್ಥೆಯ ಮುಖ್ಯಸ್ಥೆ ಶಾಂತಲಾ ಮಾತನಾಡಿ, ವಿಕಲಚೇತನ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಪ್ರತಿಯೊಬ್ಬರು ಅವಕಾಶವನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಸಹಕರಿಸಬೇಕೆಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್ ಮಾತನಾಡಿ, ಬೆಂಗಳೂರಿನ ಐಟಿ ಬಿಟಿ ಕಂಪನಿಯ ಉದ್ಯೋಗಿಗಳು ವಾರಾಂತ್ಯದಲ್ಲಿ ಮೋಜು-ಮಸ್ತಿಯಲ್ಲಿ ಪಾಲ್ಗೊಳ್ಳುವುದನ್ನು ಕಂಡಿದ್ದೇವೆ. ಆದರೆ ಇಲ್ಲಿ ಈ ದಿನ ಬಂದಿರುವ ಸ್ಟೇಟ್ ಸ್ಟ್ರೀಟ್ ಎಂಬ ಸಂಸ್ಥೆಯ ಉದ್ಯೋಗಿಗಳು ವಾರಾಂತ್ಯದಲ್ಲಿ ಹಿಂದುಳಿದ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಆಗಮಿಸಿ ಗಿಡ ನೀಡುವುದು, ಸ್ವಚ್ಛತಾ ಕಾರ್ಯವನ್ನು ಮಾಡುವುದು, ಕಲಿಕಾ ಸಾಮಗ್ರಿಗಳನ್ನು ವಿತರಿಸುವುದು, ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣದಾಯಕವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಕೈಜೋಡಿಸಬೇಕೆಂದು ವಿನಂತಿಸಿದರು
ನವಜೀವನ ಸಂಸ್ಥೆಯ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಹಲವು ದಾನಿಗಳು ಹಾಗೂ ಸಂಘ-ಸಂಸ್ಥೆಯವರು ಕೊಡುಗೆ ನೀಡಿದ್ದು ಅವರ ಕೊಡುಗೆಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರುಗಳನ್ನು ತರಬೇಕೆಂದು ಹೇಳಿದರು
ಜಂಗಮಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸುಜಾತ ನರಸಿಂಹಯ್ಯ, ಸದಸ್ಯರಾದ ಫಯಾಜ್, ವೆಂಕಟೇಶ್, ಕಾರ್ಯದರ್ಶಿ ರಾಧಾಕೃಷ್ಣ, ಅಕೌಂಟೆಂಟ್ ಮಂಜುನಾಥ್, ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಬಿಕಾ, ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಮೆಹಬೂಬ್ ಪಾಷಾ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾದ ಸುಷ್ಮಾ, ನಾಗರತ್ನ, ಲತಾ, ಮೇಘ ಜೋಶಿ, ವೆಂಕಟ ಲಕ್ಷ್ಮಮ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಪ್ರಕಾಶ್, ಶಿಡ್ಲಘಟ್ಟ ಬಿ.ಆರ್.ಸಿ ಕೇಂದ್ರದ ಬಿ.ಐ.ಇ.ಆರ್.ಟಿ ಜಗದೀಶ್, ಸ್ಟೇಟ್ ಸ್ಟ್ರೀಟ್ ಸಂಸ್ಥೆಯ ಹಿಮ ಮಂಜುನಾಥ್, ನವಜೀವನ ಸಂಸ್ಥೆಯ ಕಾರ್ಯದರ್ಶಿ ರವಿ, ಶಾಲಾ ಸಿಬ್ಬಂದಿ, ಪೋಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.