Sidlaghatta : ಇದೀಗ ಮುಂಗಾರು ಮಳೆ ಆರಂಭ ಕಾಲವಾದ್ದರಿಂದ ಮಳೆ ನೀರು ಮನೆಯ ಸುತ್ತ ಮುತ್ತ ನಿಂತು ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದು ಹೆಚ್ಚು. ಆದ್ದರಿಂದ ಮಳೆ ನೀರು ನಿಲ್ಲದಂತೆ ಎಚ್ಚರಿಕೆವಹಿಸುವಂತೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಬೇಕೆಂದು ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಡೆಂಗೆ, ಚಿಕನ್ ಗುನ್ಯ ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬುಧವಾರ ಆರೋಗ್ಯ ಶಿಕ್ಷಣ ನೀಡಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದಂತ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಸೊಳ್ಳೆಗಳ ಉತ್ಪತ್ತಿ ಆಗದಂತೆ ಮತ್ತು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದೆ ಎಚ್ಚರಿಕೆಯಿಂದ ಇರಬೇಕು. ಇದೇ ನಾವು ಡೆಂಗೆ ಮತ್ತು ಚಿಕನ್ ಗುನ್ಯದಂತ ಜ್ವರ ಬರದಂತೆ ದೂರ ಇರಲು ಸಹಕಾರಿ ಆಗುತ್ತದೆ ಎಂದರು.
ಮನೆ ಬಳಿ ಒಡೆದ ಮಡಿಕೆ, ಕೊಬ್ಬರಿ ಚಿಪ್ಪು, ಪ್ಲಾಸ್ಟಿಕ್ ಬಾಟಲಿಗಳು, ಹಳೆಯ ಟೈರ್ ಇನ್ನಿತರೆ ವಸ್ತುಗಳಲ್ಲಿ ಮಳೆ ನೀರು ನಿಲ್ಲಲಿದೆ. ಇದು ಸೊಳ್ಳೆಗಳ ಲಾರ್ವಾ ಉಗಮವಾಗಲು ಮತ್ತು ಸೊಳ್ಳೆಗಳು ಹುಟ್ಟಲು ಪ್ರಶಸ್ತವಾದ ತಾಣವಾಗಿದ್ದು ಈ ವಾತಾವರಣವನ್ನು ನಿರ್ಮೂಲನೆ ಮಾಡಬೇಕೆಂದರು.
ಜತೆಗೆ ರಾತ್ರಿ ವೇಳೆ ಅಥವಾ ಹಗಲಿನಲ್ಲಿ ಮಲಗುವಾಗ ಸೊಳ್ಳೆ ಪರದೆ ಬಳಸಿ ಸೊಳ್ಳೆಗಳ ಕಡಿತದಿಂದ ದೂರವಿರಬೇಕು, ಒಂದೊಮ್ಮೆ ಜ್ವರದಂತ ಲಕ್ಷಣಗಳ ಕಂಡು ಬಂದಲ್ಲಿ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿಕೊಳ್ಳಬೇಕೆಂದರು.
ಈ ಕುರಿತು ಪಿಡಿಒಗಳು ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ನೀವು ಸದಾ ಜನರೊಂದಿಗೆ ಒಡನಾಟವಿಟ್ಟುಕೊಂಡಿದ್ದು ಇದು ಸಹಕಾರಿ ಆಗಲಿದೆ ಎಂದು ಆಶಿಸಿದರು.
ತಾಲ್ಲೂಕು ಪಂಚಾಯಿತಿ ಪ್ರಭಾರಿ ಇಒ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ನಿರೀಕ್ಷಕ ದೇವರಾಜ್, ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.