ತಾಲ್ಲೂಕಿನ ಬೋದಗೂರು ಬಳಿಯ ಲೇಔಟ್ ನಲ್ಲಿ ಭಾನುವಾರ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಶಿಡ್ಲಘಟ್ಟ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಜಿಲ್ಲಾ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿನ ಸ್ಕೇಟಿಂಗ್ ಟ್ರಾಕ್ ಉಪಯುಕ್ತವಾಗುವ ರೀತಿಯಲ್ಲಿ ಮಾಡಲು ಯೋಜನೆ ರೂಪಿಸಿ ಸ್ಕೇಟಿಂಗ್ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ವತಿಯಿಂದ ಮಾಡುತ್ತಿರುವ ಕೆಲಸಗಳು ಶ್ಲಾಘನೀಯ. ಕ್ರೀಡಾಂಗಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಿಮ್ಮೆಲ್ಲಾ ಯೋಜನೆಗಳು ಹಾಗೂ ರೂಪುರೇಷೆಗಳನ್ನು ತನ್ನಿ. ಕೂತು ಚರ್ಚಿಸಿ ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸೋಣ. ನಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರು ನಮ್ಮ ಜಿಲ್ಲೆಗೆ ಕೀರ್ತಿ ತರುವ ಸಾಧಕರಾಗಲಿ ಎಂದು ಹೇಳಿದರು.
ಮಕ್ಕಳಲ್ಲಿ ಉತ್ಸಾಹ, ಪ್ರತಿಭೆ ಇರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಸ್ಕೇಟಿಂಗ್ ನಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದನ್ನು ಕಂಡು ಖುಷಿಯಾಗಿದೆ. ಈ ಮಕ್ಕಳಿಗೆ ಸೂಕ್ತವಾದ ಟ್ರಾಕ್ ಮಾಡಿಸಿಕೊಡೋಣ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಕೇಟಿಂಗ್ ಕೋಚ್ ರವೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ರಾಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡಿ, ತಾಲ್ಲೂಕು ಆರೋಗಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಿಡಿಪಿಒ ನಾಗವೇಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜಯೇಂದ್ರ, ಸದಸ್ಯೆ ಆನೂರು ಲತಾ ದೇವರಾಜು, ಎಚ್.ಆರ್.ವೆಂಕಟೇಶ್, ನಿರಂಜನ್, ಟಿ.ಟಿ.ನರಸಿಂಹಪ್ಪ, ಪ್ರಭಾಕರ್, ಪಿಡಿಒ ಕಾತ್ಯಾಯಿನಿ, ಶಿವಪ್ಪ ಹಾಜರಿದ್ದರು.