Sidlaghatta : ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತೆ ನಾಡಪ್ರಭು ಕೆಂಪೇಗೌಡರು ಜನಮಾನಸದಲ್ಲಿ ನೆಲೆಸಿರುವುದಕ್ಕೆ ಕಾರಣ ಅವರ ಸರ್ವಧರ್ಮ ಸಹಿಷ್ಣುತೆ, ಸಾಮಾಜಿಕ ಸೇವೆ ಮತ್ತು ಉತ್ತಮ ಪ್ರಜಾಪಾಲನೆಯಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಕೆಂಪೇಗೌಡ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ. ಅಭಿವೃದ್ಧಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿ ನಮಗೆ ಮಾದರಿಯಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ, ಚಿಂತಾಮಣಿ ರಸ್ತೆಯಲ್ಲಿರುವ ಕೆಂಪೇಗೌಡ ಸಭಾಂಗಣದ ಬಳಿಯಿರುವ ಕೆಂಪೇಗೌಡ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ತಾಲ್ಲೂಕಿನ ಇದ್ಲೂಡು ರಸ್ತೆಯಲ್ಲಿರುವ ಪಟ್ರಹಳ್ಳಿ ಶ್ರೀ ಬಯಲಾಂಜನೇಯಸ್ವಾಮಿ ದೇವಾಲಯದ ಬಳಿ ಸಸಿಗಳನ್ನು ನೆಡಲಾಯಿತು.
ಐ.ಆರ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಂಸಶ್ರೀ, ಐ.ಐ.ಟಿ ಗೆ ಆಯ್ಕೆಯಾದ ಕಿಶನ್, ಟೆನ್ನಿಸ್ ಕ್ರೀಡೆಯಲ್ಲಿ ದಕ್ಷಿಣ ಏಷ್ಯಾ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಮೇಲೂರಿನ ಎಂ.ಪುನೀತ್ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಗತಿಪರ ರೈತರಾದ ಕಾಚಹಳ್ಳಿ ರಾಮಾಂಜಿನಪ್ಪ, ಕ್ಯಾಸಗೆರೆ ಕೆ.ಎನ್.ಜಯರಾಮರೆಡ್ಡಿ, ತಿಪ್ಪೇನಹಳ್ಳಿ ದೇವರಾಜು, ಮೇಲೂರು ಪ್ರೇಮಾ ಮತ್ತು ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಎಸ್.ನಾರಾಯಣ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಒಕ್ಕಲಿಗರ ಯುವಸೇನೆಯ ತಾಲ್ಲೂಕು ಅಧ್ಯಕ್ಷ ಜೆ.ವೆಂಕಟಸ್ವಾಮಿ, ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಆನಂದ ಗೌಡ, ಬಂಕ್ ಮುನಿಯಪ್ಪ, ರೈತ ಸಂಘದ ಮುನಿಕೆಂಪಣ್ಣ, ಪ್ರತೀಶ್, ರವಿಪ್ರಕಾಶ್, ಆನೂರು ವಿಜಯೇಂದ್ರ, ಎ.ನಾಗರಾಜ್ ಹಾಜರಿದ್ದರು.