Jangamakote, Sidlaghatta : ರೈತ ಉತ್ಪಾದಕ ಕಂಪನಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ರೈತರಿಗೆ ತಿಳಿಯಪಡಿಸಬೇಕು, ಆಗ ಮಾತ್ರ ರೈತ ಉತ್ಪಾದಕ ಕಂಪನಿಯ ಸವಲತ್ತುಗಳು ಹೆಚ್ಚಿನ ಸಂಖ್ಯೆಯ ರೈತರಿಗೆ ಸಿಗಲಿದೆ ಎಂದು ನಬಾರ್ಡ್ ನ ಅಧಿಕಾರಿ ಸಾಯಿ ಗಣೇಶ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿಯ ಕಚೇರಿಗೆ ಭೇಟಿ ನೀಡಿ, ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಚರ್ಚಿಸಿದರು.
ಈ ಭಾಗದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಜತೆಗೆ ಹೂ ಹಣ್ಣು ತರಕಾರಿಗಳನ್ನು ಕೂಡ ಬೆಳೆಯುವ ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ರೈತರಿಗೆ ಅಗತ್ಯವಾಗಿರುವ ಪೂರಕ ಪರಿಕರಗಳು, ರಾಸಾಯನಿಕ ಗೊಬ್ಬರ ಇನ್ನಿತರೆ ವಸ್ತುಗಳು ಸುಲಭವಾಗಿ ಹಾಗೂ ಕಡಿಮೆ ಬೆಲೆಗೂ ಸಿಗುವಂತಾಗಬೇಕು ಎಂದರು.
ಇದಕ್ಕೂ ಮುಖ್ಯವಾಗಿ ರೈತರಿಗೆ ಸಧ್ಯದ ಪರಿಸ್ಥಿತಿಯಲ್ಲಿ ರೇಷ್ಮೆ ಕೃಷಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಕೆಲಸ ಆಗಬೇಕು, ತರಬೇತಿ ಮಾರ್ಗದರ್ಶನ ಸಲಹೆ ಸೂಚನೆಗಳು ಸಿಗುವಂತಾಗಬೇಕು ಎಂದು ಹೇಳಿದರು.
ರಾಜ್ಯ ಮಾತ್ರವಲ್ಲ ದೇಶದಲ್ಲೆಡೆ ರೈತ ಉತ್ಪಾದಕ ಕಂಪನಿಗಳು ಆರಂಭಗೊಂಡ ನಂತರ ರೈತರಿಗೆ ಸಾಕಷ್ಟು ರೀತಿಯಲ್ಲಿ ನೆರವಾಗುತ್ತಿದೆ. ಕಡಿಮೆ ಬೆಲೆಗೆ ಕೃಷಿ ಪರಿಕರಗಳು, ರಸಗೊಬ್ಬರಗಳು ಸಿಗುತ್ತಿವೆ. ಸಲಹೆ ಸೂಚನೆ ತರಬೇತಿಗಳ ಮೂಲಕವೂ ರೈತರಿಗೆ ಹೆಚ್ಚಿನ ನೆರವು ಸಿಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮಿಗಿಲಾಗಿ ರೈತರು ತಾವು ಬೆಳೆಯುವ ಉತ್ಪನ್ನಳಿಗೆ ಸೂಕ್ತ ಮಾರುಕಟ್ಟೆ, ಸೂಕ್ತ ಬೆಲೆ ಸಿಗುವಂತ ಕೆಲಸವೂ ಈ ರೈತ ಉತ್ಪಾದಕ ಕಂಪನಿಗಳ ಮೂಲಕ ಸಿಗುತ್ತಿರುವುದು ಕೃಷಿ ಮತ್ತು ಕೃಷಿಕರ ಅಭಿವೃದ್ದಿ ಬೆಳವಣಿಗೆಗೆ ಪೂರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಂಗಮಕೋಟೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಚಿದಾನಂದಮೂರ್ತಿ ಮಾತನಾಡಿ, ಜಂಗಮಕೋಟೆ ರೈತ ಕಂಪನಿಯ ಕಾರ್ಯಚಟುವಟಿಕೆಗಳು, ವ್ಯಾಪಾರ ವಹಿವಾಟು, ರೈತರಿಗೆ ನೀಡಿದ ತರಬೇತಿ ಇನ್ನಿತರೆ ಕಾರ್ಯಗಳ ಬಗ್ಗೆ ವಿವರಿಸಿದರು.
ಮಂಡ್ಯದ ವಿಕಸಿತ ಸಂಸ್ಥೆಯ ಮುಖ್ಯಾಧಿಕಾರಿ ಕೆಂಪಯ್ಯ, ಜ್ಯೋತಿ, ಲವಕುಮಾರ್, ಜಂಗಮಕೋಟೆ ರೈತ ಉತ್ಪಾದಕ ಕಂಪನಿಯ ಕುಮಾರ್, ಜಯರಾಂ, ಸರಿತಗಂಗಾಧರ್, ಸಿಇಒ ಸುರೇಶ್, ಲೆಕ್ಕಾಕಾರಿ ಸಂಧ್ಯ ಹಾಜರಿದ್ದರು.