Sidlaghatta : ಶಿಡ್ಲಘಟ್ಟ ನಗರಸಭೆಯಿಂದ ಸೆಲ್ಫೀ ಬೂತ್ ಹಾಗೂ ಉಡುಗೊರೆಗಳನ್ನು ನೀಡುವ ಮೂಲಕ ಬಳಸದ ವಸ್ತು ಮರುಪಡೆಯುವ ಸೌಲಭ್ಯಕೇಂದ್ರಕ್ಕೆ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ನಗರಸಭೆಯಲ್ಲಿ ಸೆಲ್ಫೀ ಬೂತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ನಗರಸಭೆಯ ವತಿಯಿಂದ ಮೇ 20 ರಿಂದ ಜೂನ್ 4 ರ ವರೆಗೆ ಐ.ಡಿ.ಎಸ್.ಎಂ.ಟಿ ವಾಣಿಜ್ಯ ಮಳಿಗೆ ಸಂಖ್ಯೆ 12, ಕೋಟೆ ವೃತ್ತದ ಬಳಿಯ ನಗರಸಭೆಯ ಸಮುದಾಯ ಭವನ, ಆಶ್ರಯ ಬಡಾವಣೆಯ ಬಾಬಾ ಫಕೃದ್ಧೀನ್ ರವರ ಮನೆ ರಸ್ತೆ, ಹೆಲ್ತ್ ಕಾಲೋನಿಯ ವಾರ್ಡ್ ನಂಬರ್ 13 ರ ನಗರಸಭೆ ವಾಣಿಜ್ಯ ಮಳಿಗೆ, ದ್ವಿಮುಖ ಗಣಪತಿ ದೇವಸ್ಥಾನದ ಹಿಂಭಾಗದ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳನ್ನು ಕೇಂದ್ರಗಳಲ್ಲಿ ನೀಡಿ, ಸೆಲ್ಫೀ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ನಿಮ್ಮನ್ನು ನೋಡಿ ಇನ್ನಷ್ಟು ಮಂದಿ ಉತ್ತೇಜನಗೊಳ್ಳುತ್ತಾರೆ. ಪ್ರೋತ್ಸಾಹಕವಾಗಿ ಉಡುಗೊರೆಗಳನ್ನು ನೀಡುತ್ತೇವೆ ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ಹಾಜರಿದ್ದರು.