Sidlaghatta : ಶಿಡ್ಲಘಟ್ಟ ನಗರದಲ್ಲಿರುವ RO ಘಟಕ(ಶುದ್ಧ ಕುಡಿಯುವ ನೀರಿನ ಘಟಕ)ಗಳ ನಿರ್ವಹಣೆ ಮಾಡುವ ಗುತ್ತಿಗೆಯ ಬಹಿರಂಗ ಹರಾಜನ್ನು ನಗರಸಭೆಯು ನಡೆಸಿದ್ದು 7 ಘಟಕಗಳ ಪೈಕಿ 1 ಘಟಕಕ್ಕಷ್ಟೆ ಬಿಡ್ ನೀಡಿದ್ದು ಇನ್ನುಳಿದ 6 ಘಟಗಳಿಗೆ ಯಾರೂ ಕೂಡ ಬಿಡ್ ನೀಡಲಿಲ್ಲ.
ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್ ಉಪಸ್ಥಿತಿಯಲ್ಲಿ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ 18ನೇ ವಾರ್ಡ್ ನ ನ್ಯಾಯಾಲಯದ ಹಿಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ 13,600 ರೂಗಳ ಮಾಸಿಕ ಬಾಡಿಗೆಯ ಬಿಡ್ ನ್ನು ಹಸೇನ್ ಎಂಬುವವರು ನೀಡಿದರು.
ಇನ್ನುಳಿದಂತೆ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಸ್ಥಾನ ಹತ್ತಿರದ ಘಟಕ, ಗಂಗಮ್ಮ ಗುಡಿ ದೇವಸ್ಥಾನ ಹತ್ತಿರದ ಘಟಕ, ಸಂತೆ ಮೈದಾನದಲ್ಲಿನ ಘಟಕ, ಬಿಇಒ ಕಚೇರಿ ಆವರಣದ ಬಳಿಯ ಘಟಕ, ಕೋಟೆಯ ಓವರ್‌ಹೆಡ್ ಟ್ಯಾಂಕ್ ಬಳಿಯ ಘಟಕ ಹಾಗೂ ವಾರ್ಡ್‌ನ 13 ರ ಅಶ್ವತ್ಥ ಕಟ್ಟೆ ಬಳಿಯ ಘಟಕದ ನಿರ್ವಹಣೆ ಗುತ್ತಿಗೆಗೆ ಯಾರೊಬ್ಬರೂ ಸಹ ಬಿಡ್ ನೀಡಲೇ ಇಲ್ಲ.
ಗಂಗಮ್ಮ ಗುಡಿ ದೇವಸ್ಥಾನ ಹತ್ತಿರದ ಘಟಕ ಹಾಗೂ ಕೋಟೆಯ ಓವರ್ ಹೆಡ್ ಟ್ಯಾಂಕ್ ಬಳಿಯ ಘಟಕದ ನಿರ್ವಹಣೆಯ ಗುತ್ತಿಗೆಯನ್ನು ಪರಿಶಿಷ್ಟ ಜಾತಿಯವರಿಗೆ ಹಾಗೂ ಇನ್ನುಳಿದ ಎಲ್ಲ 5 ಘಟಕಗಳ ನಿರ್ವಹಣೆ ಗುತ್ತಿಗೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಬಹಿರಂಗ ಹರಾಜು ನಡೆಸಲಾಯಿತು.
ಪರಿಶಿಷ್ಟ ಜಾತಿಗೆ ಮೀಸಲಾದ ಘಟಕಗಳಿಗೆ ಬಿಡ್ ನೀಡಲು 25 ಸಾವಿರ ಹಾಗೂ ಸಾಮಾನ್ಯ ವರ್ಗದವರಿಗೆ ಮೀಸಲಾಗಿಟ್ಟ ಘಟಕಗಳ ನಿರ್ವಹಣೆಗೆ ಬಿಡ್ ನೀಡುವವರು 50 ಸಾವಿರ ರೂಗಳ ಮುಂಗಡ ಠೇವಣಿ ಇಡಬೇಕಿತ್ತು ಒಟ್ಟು 13 ಮಂದಿ ಬಿಡ್ ನಲ್ಲಿ ಭಾಗವಹಿಸಿದ್ದರು.
47 ತಿಂಗಳ ಕಾಲ ನಿರ್ವಹಣೆಯ ಗುತ್ತಿಗೆ ಇದಾಗಿದೆ. ಬಿಡ್ ನಲ್ಲಿ ನಿಗದಿಯಾದ ಮಾಸಿಕ ಬಾಡಿಗೆಯನ್ನು ನಗರಸಭೆಗೆ ಪಾವವತಿಸಿ ಘಟಕವನ್ನು ಗುತ್ತಿಗೆದಾರರೇ ನಿರ್ವಹಿಸಬೇಕು, ಘಟಕಕ್ಕೆ ನೀರನ್ನು ಮಾತ್ರವೇ ನಗರಸಭೆಯಿಂದ ಪೂರೈಸಲಾಗುತ್ತದೆ. ಸಾರ್ವಜನಿಕರಿಗೆ 20 ಲೀಟರ್ ಶುದ್ಧ ನೀರಿಗೆ ಕೇವಲ 5 ರೂ ಮಾತ್ರ ಶುಲ್ಕ ವಿಧಿಸಬೇಕೆಂಬ ಹತ್ತು ಹಲವು ಷರತ್ತುಗಳನ್ನ ವಿಧಿಸಲಾಗಿದೆ.
ಹರಾಜು ಮುಂದೂಡಲು ಆಗ್ರಹ :
ಆರ್.ಒ ಘಟಕಗಳ ನಿರ್ವಹಣೆ ಮಾಡುವ ಗುತ್ತಿಗೆಯ ಬಹಿರಂಗ ಹರಾಜಿಗೆ ನಗರಸಭೆಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ನಗರಸಭೆ ಆಯುಕ್ತ ಮಂಜುನಾಥ್ ಮೇಲೆ ಒತ್ತಡ ಹಾಕಿದರು.
ಯಾವ ಆರ್.ಒ ಘಟಕಗಳೂ ಸುಸ್ಥಿತಿಯಲ್ಲಿಲ್ಲ. ಘಟಕಗಳನ್ನು ದುರಸ್ತಿ ಮಾಡಿಸಬೇಕಾದರೆ ಲಕ್ಷ ಲಕ್ಷ ರೂ ಬೇಕು. ಆದರೆ ನೀವು ಯಾವ ಸ್ಥಿತಿಯಲ್ಲಿ ಇದೆಯೋ ಅದೇ ಸ್ಥಿತಿಯಲ್ಲಿ ಘಟಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುತ್ತೀರಿ. ಆದ್ದರಿಂದ ಯಾರೂ ಬಿಡ್ ನೀಡಲು ಸಿದ್ದವಿಲ್ಲ.
ಜತೆಗೆ ಕೆಲ ಸದಸ್ಯರು ಹಣಕ್ಕಾಗಿ ಘಟಕಗಳಲ್ಲಿ ನೀರನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಲಕ್ಷ ಲಕ್ಷ ಹಣ ಲೂಠಿ ಮಾಡುತ್ತಿದ್ದಾರೆ ಎಂದು ವಿಡಿಯೋಗಳು ಹರಿದಾಡುತ್ತಿವೆ. ಈ ಸಮಯದಲ್ಲೆ ಹರಾಜು ನಡೆದರೆ ಸಾರ್ವಜನಿಕರಲ್ಲಿನ ಅನುಮಾನ ಇನ್ನಷ್ಟು ಹೆಚ್ಚುತ್ತದೆ.
ಆದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಿ ಎಂದು ನಗರಸಭೆ ಸದಸ್ಯ ನಂದು ಕಿಷನ್, ನಾರಾಯಣಸ್ವಾಮಿ ಇನ್ನಿತರೆ ಸದಸ್ಯರು ಒತ್ತಾಯಿಸಿದರು.