ಶಿಡ್ಲಘಟ್ಟ ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆದರೂ ಸಹ ಕೆಲವರು ಕದ್ದುಮುಚ್ಚಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಜನ ಮತ್ತು ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದೆಂದು ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ನಗರದ ವಾಸವಿ ರಸ್ತೆಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದು ಚರಂಡಿಗಳಲ್ಲಿ ಸಿಲುಕಿ ಮಳೆಗಾಲದಲ್ಲಿ ಕೊಳಚೆ ನೀರು ರಸ್ತೆಗಳ ಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ನಾಗರಿಕರು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.
ನಗರಸಭೆಯ ವಾರ್ಡ್ ಸಂಖ್ಯೆ 3ರ ನಗರಸಭಾ ಸದಸ್ಯೆ ಚೈತ್ರ ಮನೋಹರ್ ಅವರ ಮನವಿ ಮೇರೆಗೆ ನಗರದ ವಾಸವಿ ರಸ್ತೆಯಲ್ಲಿ ಚರಂಡಿಯನ್ನು ಸ್ವಚ್ಛ ಗೊಳಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಮುಂದಿನ ಒಂದು ವಾರದ ಒಳಗೆ ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತವಾಗಿಯೇ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಪಾಡಲು ಈಗಾಗಲೇ ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್ ಅವರ ಸೂಚನೆಯನ್ನು ಪಾಲಿಸಿ ಕ್ರಮಕೈಗೊಳ್ಳಲಾಗಿದೆ. ಅವರು ಸಹ ಅನೇಕ ವಾರ್ಡ್ ಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆಯ ನೀರು ಸರಬರಾಜು ವಿಭಾಗದ ಮುರಳಿ ಹಾಜರಿದ್ದರು.