ಶಿಡ್ಲಘಟ್ಟ ನಗರದ ಮೊದಲನೇ ವಾರ್ಡಿನ ಸಿ.ಆರ್.ಲೇಔಟ್ ನಿವಾಸಿಗಳು ಸಮರ್ಪಕ ಕುಡಿಯುವ ನೀರು, ಸ್ವಚ್ಛತೆ ಹಾಗೂ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ನಗರಸಭೆಯ ಮುಂದೆ ಪ್ರತಿಭಟಿಸಿದರು.
“ಸಿ.ಆರ್.ಲೇಔಟ್ ನಲ್ಲಿ ರಸ್ತೆಗಳನ್ನು ಮಾಡಿ ಸುಮರು ಹದಿನೈದು ವರ್ಷಗಳಾಗಿವೆ. ರಸ್ತೆಗಳೆಲ್ಲಾ ಹಳ್ಳಗಳು ಬಿದ್ದು ಹಾಳಾಗಿವೆ. ವಾಹನ ಸಂಚರ ದುಸ್ತರವಾಗಿದೆ. ಸಮರ್ಪಕವಾಗಿ ಕುಡಿಯುವ ನೀರು ಬಿಡುತ್ತಿಲ್ಲ. 22 ರಿಂದ 23 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಅದೂ ಕೆಲ ಹೊತ್ತು ಮಾತ್ರ. ಎಲ್ಲೆಡೆ ಮಳೆ ನೀರು ತುಂಬಿ ಹರಿಯುತ್ತಿದ್ದರೆ, ನಮಗೆ ಮಾತ್ರ ದೀಪದ ಕೆಳಗೆ ಕತ್ತಲೆ ಎಂಬಂತೆ ಕುಡಿಯುವ ನೀರಿಗೆ ಪರದಾಟವಾಗಿದೆ. ಪೌರಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ನಮ್ಮ ಸಮಸ್ಯೆಗಳನ್ನು ಹಲವು ಬಾರಿ ತಂದಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಪಕ್ಕದಲ್ಲಿಯೇ ಇರುವ ರೆಡ್ಡಿ ಬಡಾವಣೆಗೆ ಐದು ಅಥವಾ ಆರು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಏಕೆ ಈ ಮಲತಾಯಿ ಧೋರಣೆ. ಕಾರಣ ಕೇಳಿದರೆ ಪೈಪ್ ಲೈನ್ ಹಾಕಬೇಕು ಎನ್ನುತ್ತಿದ್ದಾರೆ. ಎಷ್ಟು ಕಾಲ ಬೇಕು ನಿಮಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು. ನಮಗೆ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ರಸ್ತೆ ದುರಸ್ಥಿ ಮಾಡಿಕೊಡಬೇಕು. ಅತಿ ಹೆಚ್ಚು ಕಂದಾಯವನ್ನು ನಮ್ಮ ಸಿ.ಆರ್.ಲೇಔಟ್ ಗೆ ನಿಗದಿಪಡಿಸಿದ್ದಾರೆ. ನಾವು ಅದನ್ನು ಚಾಚೂ ತಪ್ಪದೆ ಕಟ್ಟುತ್ತಿದ್ದೇವೆ. ಆದರೂ ಏಕೆ ನಮಗೆ ತೊಂದರೆ ಕೊಡುತ್ತಿದ್ದೀರಿ” ಎಂದು ಸಿ.ಆರ್.ಲೇಔಟ್ ನಿವಾಸಿ ಕೆಂಪಣ್ಣ ನೋವನ್ನು ವ್ಯಕ್ತಪಡಿಸಿದರು.
“ಸಮರ್ಪಕವಾಗಿ ಚರಂಡಿ ಸ್ವಚ್ಛತೆಯಿರದೆ ತ್ಯಾಜ್ಯ ನೀರು ಎಲ್ಲೆಂದರಲ್ಲಿ ಹರಿದು ಹೋಗುತ್ತದೆ. ಮನೆಗಳ ಮುಂದೆ ಚರಂಡಿ ಬ್ಲಾಕ್ ಆದರೆ ಅದನ್ನು ಸರಿಪಡಿಸಲು ಒಬ್ಬೊಬ್ಬ ಮನೆಯವರೂ ಐದು ನೂರು ರೂ ಕೊಡಬೇಕು. ಕಸ ಎಲ್ಲೆಂಡರಲ್ಲಿ ಗುಡ್ಡೆ ಗುಡ್ಡೆ ಬಿದ್ದಿರುತ್ತದೆ. ಕೊಳೆತು ನಾರುತ್ತಿರುತ್ತದೆ. ನಾಲ್ಕೈದು ದಿನವಾದರೂ ತಸವನ್ನು ತೆಗೆಯುವುದಿಲ್ಲ” ಎಂದು ಅನಸೂಯಮ್ಮ ದೂರಿದರು.
“ನಗರಸಭೆಯ ಅಧಿಕಾರಿಗಳು ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಗರೋತ್ಥಾನ ಯೋಜನೆಯಲ್ಲಿ ರಸ್ತೆಗಳಿಗೆ ಅನುದಾನವನ್ನು ತಂದಿದ್ದರೂ ಶಾಸಕರು ಅದನ್ನು ಅನುಮೋದನೆ ಕೊಡದೆ ಹಾಗೇ ಇಟ್ಟುಕೊಂಡಿದ್ದಾರೆ” ಎಂದು ಒಂದನೇ ವಾರ್ಡ್ ಸದಸ್ಯೆ ಪದ್ಮಿನಿ ಅವರ ಪತಿ ಕಿಶನ್ ಹೇಳಿದರು. ಅಧಿಕಾರಿಗಳೊಂದಿಗೆ ಮಾತನಾಡಿ ಒಂದು ವಾರದೊಳಗೆ ನೀರಿನ ಸಮಸ್ಯೆ ಹಾಗೂ ಸ್ವಚ್ಛತೆಯನ್ನು ಮಾಡಲು ಕ್ರಮ ಕೈಗೊಳ್ಳುವುದಾಗಿ ನಾಗರಿಕರಿಗೆ ಭರವಸೆ ನೀಡಿದರು.