Sidlaghatta : Congress ಪಕ್ಷದ ಆಂತರಿಕ ಕಲಹಗಳು, ಭಿನ್ನಾಭಿಪ್ರಾಯಗಳು, ನಾಯಕರ ಕೈತಪ್ಪಿದ ಪಕ್ಷದ ಮೇಲಿನ ಹಿಡಿತ, ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ನಾವುಗಳು ಅತಂತ್ರರಾದೆವು. ನಮ್ಮನ್ನು ಆರಿಸಿ ಕಳಿಸಿರುವ ಜನರಿಗೆ ಉತ್ತರದಾಯಿಗಳಾಗಿ ನಾವು ಒಮ್ಮತದಿಂದ ಯಾವುದೇ ಆಮಿಷಕ್ಕೊಳಗಾಗದೆ JDS ಅಭ್ಯರ್ಥಿ ವೆಂಕಟಸ್ವಾಮಿ ಅವರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ತಿಳಿಸಿದರು.
ನಗರಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್‌ನ ಏಳು ಸದಸ್ಯರಿಗೆ ಜಿಲ್ಲಾಧಿಕಾರಿಯಿಂದ ನೊಟೀಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ವ್ಯತಿರಿಕ್ತವಾಗಿ ಹೋಗಲೇ ಬೇಕಾದ ಸನ್ನಿವೇಶವನ್ನು ಕಾಂಗ್ರೆಸ್ ಪಕ್ಷದಲ್ಲಿಯೇ ಸೃಷ್ಟಿಸಲಾಯಿತು. ನಮ್ಮನ್ನು ನಗರಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ಜನರಿಗೆ ನೀರು, ಸ್ವಚ್ಛತೆ, ದೀಪ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ವಿವಿಧ ಅನುದಾನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾತು ಕೊಟ್ಟಿರುತ್ತೇವೆ.
ನಮ್ಮ ಅವಧಿ ಮುಗಿಯುತ್ತಾ ಬಂದಿದೆ. ನಾವು ನಮ್ಮ ಕೈಯಾರೆ ಹಣ ಖರ್ಚು ಮಾಡಿದ್ದೇವೆಯೇ ವಿನಃ ನಗರಸಭೆಯಿಂದ ವಿವಿಧ ಕೆಲಸಗಳನ್ನು ಮಾಡಲಾಗಿಲ್ಲ. ಈ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ಕ್ರಮ ಕೈಗೊಳ್ಳಲಿಲ್ಲ ಎಂದರು.
ಮಾಜಿ ಶಾಸಕ ವಿ.ಮುನಿಯಪ್ಪ ಅವರು, ಇನ್ನು ಮುಂದೆ ರಾಜೀವ್ ಗೌಡರು ನಿಮ್ಮ ನಾಯಕರು ಅವರನ್ನು ಬೆಂಬಲಿಸಿ ಎಂದು ನಮಗೆ ಸೂಚಿಸಿದ್ದರು. ಆದರೆ ರಾಜೀವ ಗೌಡರು ಪೂರ್ಣ ಪ್ರಮಾಣದಲ್ಲಿ ನಿರ್ಧಾರ ಕೈಗೊಳ್ಳದ ರೀತಿ ಕಾಣದ ಕೈಗಳು ಅವರನ್ನು ತಡೆ ಹಿಡಿದಿವೆ. ನಾಯಕರೇ ನಮಗೆ ದಾರಿ ತೋರಿಸದಾದಾಗ ನಾವು ನಮ್ಮನ್ನು ಆರಿಸಿ ಕಳಿಸಿರುವ ಜನರಿಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನಿಸಿದರು.
ನಗರಸಭೆ ಅಧ್ಯಕ್ಷರ ಚುನಾವಣೆ ಹಿಂದಿನ ದಿನದವರೆಗೂ ನಾವು ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿದೆವು. ಆದರೆ ಅಲ್ಲಿನ ಆಗುಹೋಗುಗಳಿಂದ ಮನನೊಂದೆವು. ಇಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಬೆಲೆ ಅಥವಾ ಸ್ಥಾನಮಾನ ಇಲ್ಲ ಎಂಬುದು ಅರಿವಾಯಿತು.
ನಾವುಗಳು ಏಕಾಏಕಿ ಬರಲಿಲ್ಲ, ಕಾಂಗ್ರೆಸ್ ನಾಯಕರಾದ ರಾಜೀವಗೌಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಮತ್ತು ಡಾಲ್ಫಿನ್ ನಾಗರಾಜ್ ಅವರಿಗೆ ವಸ್ತುಸ್ಥಿತಿ ವಿವರಿಸಿ, ನಾವು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ, ನಮಗೆ ಅಭಿವೃದ್ದಿ ಮುಖ್ಯವೇ ಹೊರತು ಸ್ವಾರ್ಥ ಸಾಧನೆಗಳಲ್ಲ ಎಂದು ತಿಳಿಸಿಯೇ ಬಂದಿದ್ದೇವೆ ಎಂದರು.
ಬೇಷರತ್ತಾಗಿ ಯಾವುದೇ ರೀತಿಯಲ್ಲಿ ಆಮಿಷಕ್ಕೆ ಒಳಗಾಗದೇ ಗೌರವದಿಂದ ಶಾಸಕ ಬಿ.ಎನ್.ರವಿಕುಮಾರ್ ಅವರ ಮನೆಗೆ ಹೋದೆವು. ಅವರೂ ಕೂಡ ನಗರದ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ನಮ್ಮ ಅವರ ಆಲೋಚನೆ ಕೇವಲ ಅಭಿವೃದ್ಧಿ ಅಷ್ಟೇ ಆಗಿದೆ. ಜನರಿಗೆ ಒಳ್ಳೆಯದು ಮಾಡುವ ಅವರ ಉದ್ದೇಶಕ್ಕೆ ನಾವು ಬೆಂಬಲ ನೀಡಿದ್ದೇವೆ.
ಕಾಂಗ್ರೆಸ್ ಎಂಬ ಮನೆಯಲ್ಲಿ ಯಜಮಾನರ ಸ್ಥಾನ ಭದ್ರವಾಗಿಲ್ಲದಿದ್ದಾಗ, ಈ ರೀತಿ ಆಗುತ್ತದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆಯಿರುವುದರಿಂದ ಹೀಗಾಗಿದೆ. ಜಿಲ್ಲಾಧಿಕಾರಿಯವರ ನೋಟಿಸ್ ಗೆ ನಾವು ಖುದ್ದಾಗಿ ಉತ್ತರಿಸುತ್ತೇವೆ ಎಂದರು.
ನಗರಸಭಾ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಈ ಹಿಂದೆ ಒಂಬತ್ತನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲಿದ್ದಾಗ, ನನಗೆ ಅಧ್ಯಕ್ಷನಾಗುವ ಅವಕಾಶವಿತ್ತು. ಈಗ ನಮಗೆ ನೋಟಿಸ್ ಜಾರಿ ಮಾಡಲು ಕಾರಣರಾಗಿರುವ ಶ್ರೀನಿವಾಸ್ ಆಗ ಗೈರು ಹಾಜರಾಗಿದ್ದರು. ಅವರ ಉದ್ದೇಶ ಪರಿಶಿಷ್ಟ ಜಾತಿಯವರು ಬೆಳೆಯಬಾರದು ಎಂಬುದಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಆಗ ನೋಟಿಸ್ ನೀಡದೆ ಈಗ ನೀಡಿರುವುದು, ಅವರ ಜಾತಿ ರಾಜಕಾರಣ ಮತ್ತು ಪರಿಶಿಷ್ಟರನ್ನು ತುಳಿಯುವಿಕೆಯು ಸ್ಪಷ್ಟವಾಗುತ್ತದೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಣಗಳಾಗಿ ಒಡೆದು ಹೋಗಿದೆ. ಪಕ್ಷವೇ ಮನೆಯೊಂದು ಮೂರು ಬಾಗಿಲಾಗಿದ್ದಾಗ ಅದನ್ನು ಅವರು ಸರಿಪಡಿಸಿಕೊಳ್ಳುವುದು ಮುಖ್ಯ ಎಂದರು.
ನಗರಸಭಾ ಸದಸ್ಯೆ ಶಿವಮ್ಮಮುನಿರಾಜು ಮಾತನಾಡಿ, ನಾನು ಅನಾರೋಗ್ಯದ ಕಾರಣದಿಂದ ಚುನಾವಣೆ ನಡೆದಾಗ ಗೈರಾಗಿದ್ದೆ. ಆದರೂ ಅನಗತ್ಯವಾಗಿ ನನಗೆ ನೋಟಿಸ್ ನೀಡಲಾಗಿದೆ ಎಂದು ವೈದ್ಯರ ಪ್ರಮಾಣಪತ್ರವನ್ನು ಪ್ರದರ್ಶಿಸಿದರು.
ನಗರಸಭಾ ಸದಸ್ಯರಾದ ಎಸ್.ಚಿತ್ರಮನೋಹರ್, ಎಸ್.ಎಂ.ಮಂಜುನಾಥ್, ಟಿ.ಮಂಜುನಾಥ್, ಜಬೀವುಲ್ಲಾ ಹಾಜರಿದ್ದರು.