Sidlaghatta : ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರು ಯಾರು ಎಂಬ ಗೊಂದಲ ಹಾಗೂ ಪ್ರಶ್ನೆ ನಾಗರಿಕರನ್ನು ಕಳೆದ ಮೂರ್ನಾಲ್ಕು ದಿನಗಳಿಂದಲೂ ಕಾಡತೊಡಗಿದೆ. ಇದಕ್ಕೆ ಸ್ಪಷ್ಟ ಉತ್ತರ ಸಧ್ಯಕ್ಕಂತೂ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ನಾಗರಿಕರಲ್ಲಿ ಉಂಟಾಗಿರುವ ಅನುಮಾನವೂ ಸಧ್ಯಕ್ಕೆ ನಿವಾರಣೆ ಆಗುವಂತಿಲ್ಲ.
ಈ ಹಿಂದೆ ಪೌರಾಯುಕ್ತರಾಗಿದ್ದ ಆರ್.ಶ್ರೀಕಾಂತ್ ಅವರನ್ನು ಸ್ಥಳ ಸೂಚನೆ ಮಾಡದೆ ಸರ್ಕಾರ ವರ್ಗಾಯಿಸಿ ಅವರ ಸ್ಥಾನದಲ್ಲಿ ದೊಡ್ಡಬಳ್ಳಾಪುರದ ನಗರಸಭೆಯಲ್ಲಿ ವ್ಯವಸ್ಥಾಪಕರಾಗಿದ್ದ ಆಂಜನೇಯುಲು ಅವರನ್ನು ಶಿಡ್ಲಘಟ್ಟದ ನಗರಸಭೆಗೆ ಪೌರಾಯುಕ್ತರನ್ನಾಗಿ ಸರ್ಕಾರ ಆದೇಶಿಸಿತ್ತು.
ಈ ಮದ್ಯೆ ಮತ್ತೆ ಆಂಜನೇಯುಲು ಅವರ ವರ್ಗಾವಣೆ ಆದೇಶವನ್ನೂ ಸಹ ಸರ್ಕಾರ ತಡೆಯಿಡಿದು ಮತ್ತೊಂದು ಆದೇಶವನ್ನು ಹೊರಡಿಸಿದೆ. ಆಂಜನೇಯುಲು ಅವರ ವರ್ಗಾವಣೆ ಆದೇಶ ರದ್ದಾಗುತ್ತಿದ್ದಂತೆ ಮತ್ತೆ ಆರ್.ಶ್ರೀಕಾಂತ್ ಅವರು ದಿಢೀರ್ ಎಂದು ನಗರಸಭೆಗೆ ಹಾಜರಾಗಿ ಕಾರ್ಯನಿರ್ವಹಿಸಲು ಮುಂದಾದರು ಎನ್ನಲಾಗಿದೆ.
ಆದರೆ ಆಂಜನೇಯುಲು ಅವರು ನನಗೆ ನನ್ನ ವರ್ಗಾವಣೆಯನ್ನು ಸರ್ಕಾರ ತಡೆಯಿಡಿದಿದೆ. ಆದರೆ ಬೇರೊಂದು ಸ್ಥಳವನ್ನು ಸೂಚಿಸಿಲ್ಲ ಮತ್ತು ಈ ಸ್ಥಳಕ್ಕೆ ಬೇರೊಬ್ಬರನ್ನೂ ನಿಯೋಜಿಸಿಲ್ಲ ಹಾಗಾಗಿ ನನ್ನನ್ನು ಮತ್ತೆ ಮುಂದುವರೆಸುವ ಇಲ್ಲವೇ ಬೇರೊಬ್ಬರನ್ನು ಇಲ್ಲಿಗೆ ನೇಮಿಸುವವರೆಗೂ ನಾನೇ ಮುಂದುವರೆಯುವಂತೆ ನನಗೆ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೇಳಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮತ್ತೊಂದು ಆದೇಶ ಬರುವವರೆಗೂ ನಿಮ್ಮನ್ನೆ ಮುಂದುವರೆಯಿರಿ ಎಂದಿರುವ ಆದೇಶ ಪತ್ರ ಕೊಡಿ ಎಂದರೆ ಆದೇಶ ಪತ್ರ ಇಲ್ಲ, ಸಚಿವಾಲಯದ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ, ಪತ್ರವೂ ಸಚಿವಾಲಯದಲ್ಲೇ ಇದೆ ಎಂದು ಆಂಜನೇಯುಲು ಅವರು ಹೇಳುತ್ತಾರೆಯೆ ಹೊರತು ಆದೇಶ ಪತ್ರವನ್ನು ತೋರಿಸುತ್ತಿಲ್ಲ.
ಇನ್ನು ಇಲ್ಲಿಂದ ವರ್ಗಾವಣೆ ಆಗಿರುವ ಆರ್.ಶ್ರೀಕಾಂತ್ ಅವರು ಆಂಜನೇಯುಲು ಅವರ ವರ್ಗಾವಣೆ ಸಂಬಂಧ ಕೆಎಟಿಯಲ್ಲಿ ತಡೆ ಆಜ್ಞೆ ತಂದಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆಯಾದರೂ ಆರ್.ಶ್ರೀಕಾಂತ್ ಅವರು ಸಹ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ.
ಹಾಗಾಗಿ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರು ಯಾರು ಎನ್ನುವ ಪ್ರಶ್ನೆ, ಅನುಮಾನ ನಾಗರಿಕರನ್ನು ಕಾಡತೊಡಗಿದ್ದು ಉತ್ತರಿಸುವವರು ಯಾರೂ ಇಲ್ಲವಾಗಿದೆ..
ಇನ್ನೊಂದು ಕಡೆ ನಗರಸಭೆ ಸದಸ್ಯರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಆಧಾರದಲ್ಲೂ ಬಣಗಳಾಗಿವೆ. ಒಂದು ಗುಂಪು ಆರ್.ಶ್ರೀಕಾಂತ್ ಅವರನ್ನು ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಮತ್ತೊಂದು ಗುಂಪು ಶತಾಯ ಗತಾಯ ಆರ್.ಶ್ರೀಕಾಂತ್ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿ ಆಂಜನೇಯುಲು ಅವರನ್ನು ತಂದು ಇಲ್ಲಿಯೆ ಮುಂದುವರೆಸುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದು ಮೂರನೇ ಗುಂಪು ದೇವನಹಳ್ಳಿ ತಾಲ್ಲೂಕು ವಿಜಯಪುರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರನ್ನು ಇಲ್ಲಿಗೆ ಪೌರಾಯುಕ್ತರನ್ನಾಗಿ ವರ್ಗಾಯಿಸಿಕೊಂಡು ಬರುವ ತೆರೆ ಮರೆಯ ಕಸರತ್ತು ನಡೆಸಿದ್ದಾರೆ.
ಅಂತೂ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರ ಸ್ಥಾನದಲ್ಲಿ ಯಾರು ಕೂರುತ್ತಾರೆ ಎನ್ನುವ ಜಿಜ್ಞಾಸೆ ನಾಗರಿಕರಲ್ಲಿ ಮನೆ ಮಾಡಿದೆ.