Sidlaghatta : ಶಿಡ್ಲಘಟ್ಟ ನಗರಸಭೆಯ 2024-25ನೇ ಸಾಲಿನ ಆಯ-ವ್ಯಯವನ್ನು ನಗರಸಭೆ ಆಡಳಿತಾಕಾರಿಗಳೂ ಆದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿದ್ದು 2,09,70,888ರೂಗಳ ಉಳಿತಾಯ ಬಜೆಟ್‌ಗೆ ಸಭೆಯಲ್ಲಿ ಅನುಮೋಧನೆ ನೀಡಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ನಾನಾ ಮೂಲಗಳಿಂದ 219,46,40,000 ರೂಗಳ ಆದಾಯವನ್ನು ನಿರೀಕ್ಷಿಸಿದ್ದು ನಾನಾ ಯೋಜನೆ, ಮೂಲ ಸೌಕರ್ಯ, ವೇತನ, ಅಭಿವೃದ್ದಿಗಾಗಿ 217,36,69,112 ರೂಗಳನ್ನು ಅಂದಾಜಿತ ಖರ್ಚು ಮಾಡಿ 2,09,70,888 ರೂಗಳ ಉಳಿತಾಯ ಬಜೆಟ್‌ನ್ನು ಪೌರಾಯುಕ್ತ ಮಂಜುನಾಥ್ ಮಂಡಿಸಿದ್ದು ಸಭೆಯಲ್ಲಿ ಅನುಮೋಧನೆ ಪಡೆಯಲಾಯಿತು.
ಈ ವೇಳೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಪ್ರಮುಖವಾಗಿ ಅಕ್ರಮ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ನಗರಸಭೆ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯಲ್ಲದೆ ಇತರೆ ಅನಾಮಧೇಯ ವ್ಯಕ್ತಿಗಳು ನಗರಸಭೆಯ ಸೀಲನ್ನು ಮಾಡಿಸಿಕೊಂಡು ಅವರೇ ಅಧಿಕಾರಿಗಳ ಸಹಿಯನ್ನು ಹಾಕಿ ನಕಲಿ ಖಾತೆಯನ್ನು ಮಾಡಿಕೊಡುತ್ತಿದ್ದಾರೆ.
ಈ ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದು ಹರೀಶ್ ಅವರ ಹೆಸರಿನಲ್ಲೇ ಈಗಲೂ ನಕಲಿ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಪೌರಾಯುಕ್ತರಿಗೆ ದೂರಿದರೆ ನಮ್ಮಲ್ಲಿ ಖಾತೆಗಳೆ ಆಗಿಲ್ಲ ಎನ್ನುತ್ತಾರೆ ಎಂದು ಸದಸ್ಯ ಲಕ್ಷ್ಮಣ್ ಇನ್ನಿತರರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರವೀಂದ್ರ ಅವರು, ಈ ಬಗ್ಗೆ ತನಿಖೆ ನಡೆಸಿ ಅಕ್ರಮದಲ್ಲಿ ಅಧಿಕಾರಿಗಳೆ ಭಾಗಿ ಆಗಿರಲಿ ಅಥವಾ ಮಧ್ಯವರ್ತಿಗಳೆ ಭಾಗಿಯಾಗಿರಲಿ ಅವರ ವಿರುದ್ದ ಕ್ರಿಮಿನಲ್ ಕೇಸನ್ನು ದಾಖಲಿಸಿ, ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಪೌರಾಯುಕ್ತ ಮಂಜುನಾಥ್ ಗೆ ಸೂಚಿಸಿದರು.
ಸದಸ್ಯ ಅನಿಲ್ ಕುಮಾರ್ ಅವರು ನಕಲಿ ಖಾತೆಗಳಿಗೆ ಕಡಿವಾಣ ಹಾಕಬೇಕಾದರೆ ನಗರಸಭೆಗೆ ಖಾತೆಗೆಂದು ಬರುವ ಅರ್ಜಿಗಳ ವಿವರ, ಖಾತೆ ಆಗಿದ್ದು ಮತ್ತು ಬಾಕಿ ಇರುವ ವಿವರವನ್ನು ನಗರಸಭೆಯ ಬೋರ್ಡ್ ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಈ ಕೆಲಸ ಮೊದಲಿನಿಂದಲೆ ಮಾಡಬೇಕಿತ್ತು ಯಾಕೆ ಮಾಡಲಿಲ್ಲ ಎಂದು ಪೌರಾಯುಕ್ತರನ್ನು ಪ್ರಶ್ನಿಸಿ ಮುಂದಿನ ದಿನಗಳಲ್ಲಾದರೂ ತಪ್ಪದೆ ಪ್ರಕಟಿಸಿ ಎಂದು ಆದೇಶಿಸಿದರು.
ಸದಸ್ಯ ಮೌಲಾ ಮಾತನಾಡಿ, ಸುಮಾರು 14 ವಾರ್ಡುಗಳಲ್ಲಿ ವಾಟರ್ ಮೆನ್ ಗಳು ಸಂಬಳ ಇಲ್ಲ ಎನ್ನುವ ಕಾರಣಕ್ಕೆ ಕೆಲಸ ಮಾಡುತ್ತಿಲ್ಲ. ಅವರಿಗೆ ನಾವೇ ಹಣ ಕೊಟ್ಟು ಕೆಲಸ ಮಾಡಿಸುವಂತಾಗಿದೆ. ಇನ್ನು ಶಾಸಕ ರವಿಕುಮಾರ್ ಅವರು ಸ್ವಂತ ಹಣ ಕೊಟ್ಟು ನಗರದಲ್ಲಿ ಬೀದಿ ದೀಪಗಳನ್ನು ಹಾಕಿಸಿದ್ದಾರೆ.
ಆದರೆ ನಗರಸಭೆಯ ಲೈನ್ ಮೆನ್ ಇಲ್ಲದ ಕಾರಣ ಸಾಕಷ್ಟು ಬೀದಿ ದೀಪಗಳನ್ನು ನಿರ್ವಹಣೆ ಮಾಡದೆ ಬೀದಿ ದೀಪಗಳು ಇದ್ದೂ ಇಲ್ಲದಂತಾಗಿದ್ದು ರಾತ್ರಿ ವೇಳೆ ನಗರದ ಅರ್ಧ ಭಾಗ ಕತ್ತಲೆ ಆವರಿಸಿದೆ ಎಂದು ದೂರಿದರು. ಕೂಡಲೆ ಲೈನ್ ಮೆನ್ ಒಬ್ಬರನ್ನು ನಿಯೋಜಿಸುತ್ತೇವೆಂದು ಪೌರಾಯುಕ್ತರು ಭರವಸೆ ನೀಡಿದರು.
ಸದಸ್ಯ ರಾಘವೇಂದ್ರ ಮಾತನಾಡಿ, ಸ್ಲಂಬೋರ್ಡ್ ನಿಂದ ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಅದನ್ನು ಅಧಿಕೃತವಾಗಿ ಯಾರಿಗೂ ವಿತರಣೆ ಮಾಡಿಲ್ಲ. ಆದರೆ ಅವುಗಳಲ್ಲಿ ಈಗಾಗಲೆ ಬಲಾಢ್ಯರು ಪ್ರವೇಶಿಸಿದ್ದು ತನಿಖೆ ನಡೆಸಿ ಅರ್ಹರಿಗೆ ಮನೆಗಳು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಇನ್ನು ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ಕುಡಿಯುವ ನೀರು, ಚರಂಡಿ ಸ್ವಚ್ಚತೆ, ಬೀದಿ ದೀಪ ನಿರ್ವಹಣೆಯಂತ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಸಧ್ಯಕ್ಕೆ ಟ್ಯಾಂಕರ್ ನೀರನ್ನು ಪೂರೈಸಿ ಎಂದು ಡಿಸಿ ಅವರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಸಿ ರವೀಂದ್ರ ಅವರು, ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಯಾವ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಖಾಸಗಿ ಕೊಳವೆಬಾವಿಯನ್ನು ಗುರ್ತಿಸಿ ಅದರಿಂದ ನೀರನ್ನು ಪೂರೈಸಿ ಹಣ ಬಿಡುಗಡೆ ಮಾಡುತ್ತೇವೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಮಂಜುನಾಥ್, ನನ್ನ ವಾರ್ಡಿನಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರನ್ನು ಪೂರೈಸಿದ್ದು ಐದು ತಿಂಗಳ ಬಿಲ್ಲನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಡಿಸಿ ಅವರು ಹಿಂದಿನದ್ದು ಬಿಡಿ ಇದೀಗ ನಾನು ಪ್ರತಿ 15 ದಿನಕ್ಕೆ ಬಿಲ್ ಹಣ ಬಿಡುಗಡೆ ಮಾಡುತ್ತೇನೆ. ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಪೂರೈಸಿ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್, ಪೌರಾಯುಕ್ತ ಮಂಜುನಾಥ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್, ನಗರಸಭಾ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು ಹಾಜರಿದ್ದರು.