Sidlaghatta : ಶಿಡ್ಲಘಟ್ಟ ನಗರಸಭೆ ವತಿಯಿಂದ ಸೋಮವಾರ ತೆರಿಗೆ ವಸೂಲಾತಿ ಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು.
2024- 25 ನೇ ಸಾಲಿನ ವಾರದ ಸಂತೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣ ಶುಲ್ಕ ಒಳಚರಂಡಿ ಶುದ್ಧೀಕರಣ ಘಟಕದಲ್ಲಿ ಶೇಖರಣೆಯಾಗುವ ತ್ಯಾಜ್ಯ ನೀರು, ಎಲ್ಲವನ್ನೂ ಒಂದು ವರ್ಷದ ಅವಧಿಗೆ ತೆರಿಗೆ ವಸೂಲಾತಿ ಹಕ್ಕನ್ನು ಬಹಿರಂಗ ಹರಾಜು ಮಾಡಲಾಯಿತು,
ನಗರಸಭೆಯ ಸಮುದಾಯ ಭವನದಲ್ಲಿ ಪೌರಾಯುಕ್ತರ ಅನುಪಸ್ಥಿತಿಯಲ್ಲಿ ಸಹಾಯಕ ಎಂಜಿನಿಯರ್ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.
ಹರಾಜು ಪ್ರಕ್ರಿಯೆಯ ನಂತರ ಮಾತನಾಡಿದ ಸಹಾಯಕ ಎಂಜಿನಿಯರ್ ಎಂ.ಎಸ್.ರಘುನಾಥ್, ಈ ವರ್ಷ ವಾರದ ಸಂತೆ 4 ಲಕ್ಷ 8 ಸಾವಿರ ರೂಪಾಯಿಗಳಿಗೆ ಸಮೀವುಲ್ಲಾ ಅವರಿಗೆ ದಕ್ಕಿತು. ಕಳೆದ ವರ್ಷ ಮೂರು ಲಕ್ಷಕ್ಕೆ ಹರಾಜಾಗಿತ್ತು. ದಿನವಹಿ ಮಾರುಕಟ್ಟೆ 3 ಲಕ್ಷ 63 ಸಾವಿರಗಳಿಗೆ ನರಸಿಂಹ ಮೂರ್ತಿಗೆ ಹರಾಜಾಯಿತು. ಕಳೆದ ವರ್ಷ 1 ಲಕ್ಷ 5 ಸಾವಿರ ರೂಪಾಯಿಗಳಿಗೆ ಹರಾಜಾಗಿತ್ತು. ಖಾಸಗಿ ಬಸ್ಸುಗಳ ವಾಹನ ನಿಲ್ದಾಣದ ಶುಲ್ಕ ಹರಾಜಿನಲ್ಲಿ ಇಬ್ಬರು ಮಾತ್ರ ಭಾಗವಹಿಸಿದ್ದು 2 ಲಕ್ಷಕ್ಕೆ ಶಿವಕುಮಾರ್ ರವರ ಪಾಲಾಯಿತು. ಕಳೆದ ವರ್ಷ 3 ಲಕ್ಷ 91 ಸಾವಿರ ರೂಪಾಯಿಗಳಿಗೆ ಹರಾಜಾಗಿತ್ತು. ಕಳೆದ ವರ್ಷಕ್ಕಿಂತ 1 ಲಕ್ಷ 91 ಸಾವಿರ ಕಡಿಮೆಗೆ ಹರಾಜಾಯಿತು. ಒಳಚರಂಡಿ ಶುದ್ಧೀಕರಣ ಘಟಕದಲ್ಲಿ ಶೇಖರಣೆಯಾಗುವ ತಾಜ್ಯ ನೀರು ಹರಾಜಿಗೆ ಯಾರು ಭಾಗವಹಿಸಿಲ್ಲ. ಕಳೆದ ವರ್ಷವೂ ಯಾರು ಭಾಗವಹಿಸಿರಲಿಲ್ಲ. ಈ ಎಲ್ಲ ವರದಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತೇವೆ. ನಂತರ ಅವರು ಮುಂದಿನ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕಿ ರಾಜರಾಜೇಶ್ವರಿ, ಪ್ರಭಾರ ಕಂದಾಯ ನಿರೀಕ್ಷಕ ಎನ್.ನಾಗರಾಜ್, ದ್ವಿತೀಯ ದರ್ಜೆ ಸಹಾಯಕ ಮೊಹಮ್ಮದ್ ಅತಿಕ್ ಉಲ್ಲಾ, ಮುನಿಕೃಷ್ಣಪ್ಪ, ಕರವಸೂಲಿಗಾರರಾದ ಜಿ.ಶ್ರೀನಿವಾಸ್, ಎಸ್. ನಾರಾಯಣಸ್ವಾಮಿ (ಅಪ್ಪಿ), ಪ್ರಭು ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.