Sidlaghatta : ಶಿಡ್ಲಘಟ್ಟ ನಗರದ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿನ ಅಧಿಕಾರಿಗಳು ಹಾಗು ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ಜಲೋದ್ಭಸ್ತ್ ಸಂಸ್ಥೆ ಹಾಗು ನಗರಸಭೆ ನಡುವೆ ಒಡಂಬಡಿಕೆಯನ್ನು ಘೋಷಿಸಿ ಜಮ್ಮು ಮತ್ತು ಕಾಶ್ಮೀರ ಮೂಲದ ಜಲೋದ್ಭಸ್ತ್ ಸಂಸ್ಥೆಯ ಮುಖ್ಯಸ್ಥೆ ಎಚ್.ವಿ.ಗಾಯಿತ್ರಿ ಮಾತನಾಡಿದರು.
ಒಳಚರಂಡಿಯ ಮ್ಯಾನ್‌ಹೋಲ್‌ಗಳಲ್ಲಿ ಮಾನವರನ್ನು ಇಳಿಸದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ವಚ್ಚಗೊಳಿಸುವ ಪ್ರಾಯೋಗಿಕ ಕಾರ್ಯಕ್ಕೆ ಶಿಡ್ಲಘಟ್ಟವನ್ನು ಆಯ್ದುಕೊಳ್ಳಲಾಗಿದ್ದು ಮುಂದಿನ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದ್ದೇವೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರ ಮೂಲದ ಜಲೋದ್ಬಸ್ತ್ ಸಂಸ್ಥೆಯು ಒಳ ಚರಂಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸ್ವಚ್ಚತೆ ಮಾಡುವ ನೂತನ ಯಂತ್ರವನ್ನು ಪರಿಷ್ಕರಿಸಿದ್ದು ಈಗಾಗಲೆ ಬೆಂಗಳೂರಿನ ಹಲವು ಕಡೆ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿ ಯಶಸ್ಸು ಸಾಧಿಸಲಾಗಿದೆ. ಈ ತಂತ್ರಜ್ಞಾನ ಬಳಸಿಯೆ ಶಿಡ್ಲಘಟ್ಟ ನಗರದಲ್ಲಿನ ಒಳ ಚರಂಡಿಯಲ್ಲಿ ಮಾನವರನ್ನು ಇಳಿಸದೆ ಹಾಗೂ ದುರ್ವಾಸನೆ ತಟ್ಟದೆ ತ್ಯಾಜ್ಯ ಕೈಗೆ ಅಂಟದೆ ಸ್ವಚ್ಚಗೊಳಿಸುವ ಪೈಲೆಟ್ ಯೋಜನೆಗೆ ಮುಂಬರುವ ಜನವರಿಯಲ್ಲಿ ಚಾಲನೆ ನೀಡಲಾಗುವುದು ಎಂದರು.
ಪೌರಾಯುಕ್ತ ಆರ್.ಶ್ರೀಕಾಂತ್ ಮಾತನಾಡಿ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ನಗರಸಭೆಯು ಒಪ್ಪಿಗೆ ಮುದ್ರೆ ಹಾಕಿದ್ದು ಮುಂದಿನ ಜನವರಿಯಲ್ಲಿ ಈ ಸಂಸ್ಥೆಯು ನಗರದ ಎಲ್ಲಾ ಒಳ ಚರಂಡಿಯ ಮ್ಯಾನ್‌ಹೋಲ್‌ನ ಸ್ವಚ್ಚತಾ ಕಾರ್ಯವನ್ನು ಉಚಿತವಾಗಿ ಕೈಗೊಳ್ಳಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಆಯುಕ್ತ ಆರ್.ಶ್ರೀಕಾಂತ್, ಜಲೋದ್ಭಸ್ತ್ ಸಂಸ್ಥೆಯ ಮುಖ್ಯಸ್ಥರಾದ ರಾಕೇಶ್ ಕಸಬಾ, ಗಾಯಿತ್ರಿ ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಮುಖಂಡರಾದ ಎಸ್.ಎಂ.ರಮೇಶ್, ಕಿಶನ್, ಇಂಜಿನಿಯರ್ ರಘು, ಆರೋಗ್ಯ ನಿರೀಕ್ಷಕ ಮುರಳಿ ಮತ್ತಿತರರು ಹಾಜರಿದ್ದರು.